ಸುಳ್ಯ : ಆಲಿಕಲ್ಲು, ಗುಡುಗು ಸಹಿತ ಮಳೆ
ಸುಳ್ಯ : ಸುಳ್ಯ ತಾಲೂಕಿನೆಲ್ಲೆಡೆ ಬುಧವಾರ ಸಂಜೆ ಗುಡುಗು, ಆಲಿಕಲ್ಲು ಸಹಿತ ಗಾಳಿ ಮಳೆಯಾಗಿದೆ.
ಸುಳ್ಯದಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ವೇಳೆಗೆ ಗಾಳಿ ಮತ್ತು ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಕೆಲವು ಕಡೆ ಗುಡುಗು, ಸಿಡಿಲಿನ ಅಬ್ಬರ ಜೋರಾಗಿತ್ತು. ಬೆಳ್ಳಾರೆಯಲ್ಲಿ ಆಲಿಕಲ್ಲು ಸಹಿತ ಮಳೆ ಆಗಿದೆ.
ಕೆಲವು ಕಡೆ ಮೋಡ ಕವಿದ ವಾತಾವರಣ, ಗುಡುಗು, ಸಿಡಿಲಿನ ಅಬ್ಬರ ಮಾತ್ರ ಇತ್ತು ಮಳೆ ಸುರಿದಿಲ್ಲ. ಕೆಲವೆಡೆ ಹನಿ ಮಳೆಯಾದರೆ, ಕೆಲವೆಡೆ ಧಾರಾಕಾರ ಮಳೆ ಸುರಿದ ಬಗ್ಗೆ ಮಾಹಿತಿಯಿದೆ. ಸುಳ್ಯ ನಗರದಲ್ಲಿಗಾಳಿ,ಮಳೆ, ಗುಡುಗು ಸಿಡಿಲು ಆರಂಭವಾದ ಕೂಡಲೇ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಸುಳ್ಯ ನಗರ ಪ್ರದೇಶ, ದೊಡ್ಡತೋಟ, ಚೊಕ್ಕಾಡಿ, ಗುತ್ತಿಗಾರು, ಅರಂತೋಡು, ಸಂಪಾಜೆ, ಬೆಳ್ಳಾರೆ, ಮಡಪ್ಪಾಡಿ ಬಾರಿ ಗಾಳಿ ಮಳೆಗೆ ಹಲವು ಕಡೆ ಮರ,ವಿದ್ಯುತ್ ಕಂಬಗಳು ಧರೆಗೆ ಉರು ಳಿದೆ. ದುಗ್ಗಲಡ್ಕ ಸಮೀಪದ ಗೋಂಟಡ್ಕದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸುಳ್ಯ-ಸುಬ್ರಹ್ಮಣ್ಯ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.





