ಮ್ಯಾನ್ಮಾರ್: ಸೈನಿಕರಿಂದ ಮನೆಗೆ ನುಗ್ಗಿ 7 ವರ್ಷದ ಬಾಲಕಿಯ ಹತ್ಯೆ
ಒಟ್ಟು 164 ಮಂದಿ ಪ್ರತಿಭಟನಾಕಾರರು ಮೃತ್ಯು

ಯಾಂಗನ್ (ಮ್ಯಾನ್ಮಾರ್), ಮಾ. 24: ಸೇನಾಡಳಿತವಿರುವ ಮ್ಯಾನ್ಮಾರ್‌ನ ಎರಡನೇ ಅತಿ ದೊಡ್ಡ ನಗರ ಮಾಂಡಲೇಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಗೋಲಿಬಾರ್ ನಡೆಸಿದಾಗ ತನ್ನ ಮನೆಯಲ್ಲಿದ್ದ ಏಳು ವರ್ಷದ ಬಾಲಕಿಯೊಬ್ಬಳು ಸಾವಿಗೀಡಾಗಿದ್ದಾಳೆ. ಕಳೆದ ತಿಂಗಳು ನಡೆದ ಸೇನಾ ಕ್ಷಿಪ್ರಕ್ರಾಂತಿಯನ್ನು ಪ್ರತಿಭಟಿಸುತ್ತಿರುವ ಜನರನ್ನು ದಮನಿಸಲು ದೇಶದ ಸೇನೆ ನಡೆಸುತ್ತಿರುವ ಹಿಂಸೆಗೆ ಬಲಿಯಾದ ಅತಿ ಚಿಕ್ಕ ವ್ಯಕ್ತಿ ಈ ಬಾಲಕಿಯಾಗಿದ್ದಾಳೆ.
ಬಾಲಕಿ ಖಿನ್ ಮಯೊ ಚಿಟ್ ತನ್ನ ತಂದೆಯ ಮಡಿಲಲ್ಲಿ ಕಳಿತಿದ್ದಾಗ, ಸೈನಿಕರು ಅವರ ಮನೆಯನ್ನು ಪ್ರವೇಶಿಸಿ ತಂದೆಗೆ ಗುಂಡು ಹಾರಿಸಲು ಯತ್ನಿಸಿದರು ಎಂದು ಬಾಲಕಿಯ ಸಹೋದರಿ ‘ಮ್ಯಾನ್ಮಾರ್ ನೌ’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಈ ಟೌನ್‌ಶಿಪ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಇನ್ನೂ ಇಬ್ಬರು ಪುರುಷರು ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಈವರೆಗೆ ಒಟ್ಟು 164 ಪ್ರತಿಭಟನಕಾರರು ಮೃತಪಟ್ಟಿದ್ದಾರೆ ಎಂದು ಸೇನಾ ವಕ್ತಾರ ಝಾವ್ ಮಿನ್ ಟುನ್ ಮಂಗಳವಾರ ಹೇಳಿದ್ದಾರೆ.
ಅದೇ ವೇಳೆ, ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ಬಳಿಕ ಕನಿಷ್ಠ 275 ಮಂದಿ ಪ್ರತಿಭಟನಕಾರರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ ಎಂದು ರಾಜಕೀಯ ಕೈದಿಗಳ ಸಂಘ ಮಂಗಳವಾರ ತಿಳಿಸಿದೆ.







