ಸೂಯೆಝ್ ಕಾಲುವೆಯಲ್ಲಿ ತಳಕ್ಕೆ ತಾಗಿ ನಿಂತ ಬೃಹತ್ ಹಡಗು; ಇತರ ಹಡಗುಗಳ ಪ್ರಯಾಣವೂ ಸ್ಥಗಿತ

ಕೈರೋ (ಈಜಿಪ್ಟ್), ಮಾ. 24: ನೆದರ್‌ಲ್ಯಾಂಡ್ಸ್‌ನ ರೋಟರ್‌ಡ್ಯಾಮ್ ನಗರಕ್ಕೆ ಹೋಗುತ್ತಿದ್ದ ಬೃಹತ್ ಕಂಟೇನರ್ ಹಡಗೊಂದು ಸೂಯೆಝ್ ಕಾಲುವೆಯ ತಳಕ್ಕೆ ತಾಗಿ ನಿಂತುಕೊಂಡಿದೆ ಹಾಗೂ ಈ ಸಮುದ್ರ ಮಾರ್ಗದ ಮೂಲಕ ಹಾದುಹೋಗುವ ಇತರ ಹಡಗುಗಳಿಗೂ ತಡೆಯಾಗಿದೆ.
ಸೂಯೆಝ್ ಕಾಲುವೆಯ ಮೂಲಕ ಕೆಂಪು ಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದತ್ತ ಸಾಗುತ್ತಿದ್ದ 2 ಲಕ್ಷ ಟನ್ ತೂಕದ ಹಡಗು ಮಂಗಳವಾರ ಕಾಲುವೆಯ ತಳಕ್ಕೆ ತಾಗಿ ಸ್ಥಗಿತಗೊಂಡಿತು. ಹಡಗಿನಲ್ಲಿ ವಿದ್ಯುತ್ ವೈಫಲ್ಯ ಸಂಭವಿಸಿದ ಬಳಿಕ ಈ ಅಪಘಾತ ಸಂಭವಿಸಿದೆ ಎಂದು ಹಡಗು ಕಂಪೆನಿ ಜಿಎಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಈ ಹಡಗಿನ ಹಿಂದಿನಿಂದ ಬರುತ್ತಿದ್ದ ಇತರ 15 ಹಡಗುಗಳೂ ಈಗ ಲಂಗರು ಹಾಕಿದ್ದು, ಮುಂದಿನ ಪ್ರಯಾಣಕ್ಕೆ ಕಾಲುವೆ ತೆರವುಗೊಳ್ಳುವುದನ್ನು ಎದುರು ನೋಡುತ್ತಿವೆ. ವಿರುದ್ಧ ದಿಕ್ಕಿನಲ್ಲಿ ಹೋಗಬೇಕಾಗಿದ್ದ ಹಲವಾರು ಹಡಗುಗಳೂ ಕಾಲುವೆಯಲ್ಲಿ ಸಿಕ್ಕಿಹಾಕಿಕೊಂಡಿವೆ.
‘ಎವರ್ ಗಿವನ್’ ಕಂಟೇನರ್ ಹಡಗು 400 ಮೀಟರ್ ಉದ್ದವಿದ್ದು, 59 ಮೀಟರ್ ಅಗಲವಿದೆ.
Next Story





