ಟಿಆರ್‌ಪಿ ಹಗರಣ: ಅರ್ನಬ್‌ರನ್ನು ಬಂಧಿಸುವುದಾದರೆ 3 ದಿನದ ಮೊದಲು ನೋಟಿಸ್ ನೀಡಲು ಹೈಕೋರ್ಟ್ ಸೂಚನೆ

ಮುಂಬೈ, ಮಾ.24: ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಬಂಧಿಸುವುದಾದರೆ 3 ದಿನದ ಮೊದಲು ನೋಟಿಸ್ ನೀಡುವಂತೆ ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ.
ಗೋಸ್ವಾಮಿ, ರಿಪಬ್ಲಿಕ್ ಟಿವಿ ಹಾಗೂ ಇತರ ಟಿವಿ ಚಾನೆಲ್‌ಗಳ ಕುರಿತ ಆರೋಪದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುವುದಕ್ಕೆ ಆಕ್ಷೇಪ ಸೂಚಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ಮುಂಬೈ ಹೈಕೋರ್ಟ್ ಈ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ಸಿಬಿಐ ಅಥವಾ ಇತರ ತನಿಖಾ ಸಂಸ್ಥೆಗೆ ವಹಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಗೋಸ್ವಾಮಿ ಈ ಹಿಂದೆ ಮಹಾರಾಷ್ಟ್ರ ಸರಕಾರದ ವಿರುದ್ಧ ವರದಿ ಪ್ರಕಟಿಸಿದ್ದರಿಂದ ಮುಂಬೈ ಪೊಲೀಸರು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗೋಸ್ವಾಮಿಯ ವಕೀಲರು ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಇತರ ಚಾನೆಲ್‌ಗಳನ್ನೂ ಹೆಸರಿಸಿದ್ದರೂ ಪೊಲೀಸರು ರಿಪಬ್ಲಿಕ್ ಟಿವಿ ಚಾನೆಲ್‌ನ ಉದ್ಯೋಗಿಗಳನ್ನು ಮಾತ್ರ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು ಸುಮಾರು 4 ತಿಂಗಳಿಂದ ತನಿಖೆ ನಡೆಸುತ್ತಿದ್ದರೂ, ರಿಪಬ್ಲಿಕ್ ಟಿವಿ ಅಥವಾ ಗೋಸ್ವಾಮಿ ವಿರುದ್ಧದ ಯಾವುದೇ ಪುರಾವೆ ಸಂಗ್ರಹಿಸಲು ವಿಫಲವಾಗಿದ್ದಾರೆ ಎಂದು ವಕೀಲರು ಹೇಳಿದರು. ರಿಪಬ್ಲಿಕ್ ಟಿವಿ ವಿರುದ್ಧದ ತನಿಖೆ 3 ತಿಂಗಳೊಳಗೆ ಪೂರ್ಣಗೊಳ್ಳುವುದಾಗಿ ಮುಂಬೈ ಪೊಲೀಸರು ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ನ್ಯಾಯಪೀಠ, ಪ್ರಕರಣದ ವಿಚಾರಣೆ ಸದಾ ನಡೆಯುತ್ತಿರಲು ಸಾಧ್ಯವಿಲ್ಲ. ಇದು ಒಂದು ಹಂತದಲ್ಲಿ ಮುಕ್ತಾಯವಾಗಬೇಕು. ಆದ್ದರಿಂದ ತನಿಖೆಯ ವಿಚಾರಣೆ ಎದುರಿಸಲು ಗೋಸ್ವಾಮಿಗೆ ಸಮನ್ಸ್ ಕಳುಹಿಸುವುದಾದರೆ, ಅಥವಾ ಬಂಧಿಸುವುದಾದರೆ 3 ದಿನದ ಮೊದಲು(ರಜಾದಿನ ಹೊರತುಪಡಿಸಿ) ನೋಟಿಸ್ ನೀಡಬೇಕು . ನೋಟಿಸ್ ಸ್ವೀಕರಿಸಿದ ಬಳಿಕ ಗೋಸ್ವಾಮಿ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದೆ.
ಆದರೆ ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆಗೆ ಈ ಹಂತದಲ್ಲಿ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಯಾರು ಆರೋಪಿಗಳು, ಯಾರು ಆರೋಪಿಗಳಲ್ಲ ಎಂಬ ಸ್ಪಷ್ಟಚಿತ್ರಣವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.







