ಅಶ್ಲೀಲ ಸಿಡಿ ಪ್ರಕರಣ: ಆರೋಪಿಯ ಪತ್ನಿಯ ವಿಚಾರಣೆ
ಬೆಂಗಳೂರು, ಮಾ.24: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್(ವಿಶೇಷ ತನಿಖಾ ತಂಡ) ಅಧಿಕಾರಿಗಳು ಶಂಕಿತ ಆರೋಪಿ ನರೇಶ್‍ಗೌಡನ ಪತ್ನಿಯನ್ನು ವಿಚಾರಣೆ ನಡೆಸಿದರು ಎಂದು ವರದಿಯಾಗಿದೆ.
ತುಮಕೂರಿನ ಶಿರಾ ಪೊಲೀಸ್ ಠಾಣೆಯಲ್ಲಿ ಇನ್‍ಸ್ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಯಿಂದ ನರೇಶ್ ಪತ್ನಿಯನ್ನು ವಿಚಾರಣೆಗೊಳಪಡಿಸಿ, ನಾಪತ್ತೆಯಾಗಿರುವ ಪತಿ ಹಾಗೂ ಯುವತಿ ಕುರಿತ ಪ್ರಶ್ನೆಗಳನ್ನು ಕೇಳಿ, ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಂಡರು ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ನರೇಶ್‍ಗೌಡ ನಿವಾಸದ ಮೇಲೆ ಸಿಟ್ ತಂಡ ದಾಳಿ ಮಾಡಿತ್ತು. ತದನಂತರ, ನರೇಶ್ ಗೌಡ ವೀಡಿಯೊವೊಂದನ್ನು ಹರಿಬಿಟ್ಟು ಪ್ರಕರಣದಲ್ಲಿ ತಮ್ಮನ್ನು ಸಿಲುಕಿ ಹಾಕಿಸಲಾಗುತ್ತಿದ್ದು, ಕುಟುಂಬಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ನರೇಶ್ ಗೌಡ ಅವರ ಸಂಪರ್ಕದಲ್ಲಿರುವ ಶಂಕೆ ಹಿನ್ನೆಲೆಯಲ್ಲಿ ಈ ಕುರಿತು ತನಿಖಾಧಿಕಾರಿಗಳು ಪತ್ನಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.





