ಭಾರತದಲ್ಲಿ ಕೊರೋನದ ಹೊಸ ಅವಳಿ ರೂಪಾಂತರಿತ ಪ್ರಬೇಧ ಪತ್ತೆ: ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಮಾ. 24: ಕೊರೋನ ವೈರಸ್‌ನ ಹೊಸ ‘ಅವಳಿ ರೂಪಾಂತರಿತ ಪ್ರಭೇದ’ ದೇಶದ 18 ರಾಜ್ಯಗಳಲ್ಲಿ ಪತ್ತೆಯಾಗಿದೆ. ಇತರ ಹಲವು ಆತಂಕಕಾರಿ ಪ್ರಬೇಧಗಳು ಕೂಡ ಕಂಡು ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.
ಮಹಾರಾಷ್ಟ್ರದಿಂದ ಸಂಗ್ರಹಿಸಲಾದ ಶೇ. 15ರಿಂದ 20 ಮಾದರಿಗಳಲ್ಲಿ ಅವಳಿ ರೂಪಾಂತರಿತ ವೈರಸ್ ಕಂಡು ಬಂದಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. 2020 ಡಿಸೆಂಬರ್‌ನ ಮಾದರಿಗೆ ಹೋಲಿಸಿದಾಗ ಇ484ಕ್ಯೂ ಹಾಗೂ ಎಲ್452ಆರ್ ಪ್ರಬೇಧಗಳು ಇರುವ ಮಾದರಿಗಳ ಪ್ರಮಾಣದಲ್ಲಿ ಏರಿಕೆಯಾಗಿರುವುದು ಮಹಾರಾಷ್ಟ್ರದ ಮಾದರಿಗಳ ವಿಶ್ಲೇಷಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಚಿವಾಲಯ ಹೇಳಿದೆ.
ಇಂತಹ ರೂಪಾಂತರಿತ ವೈರಸ್‌ಗಳು ರೋಗನಿರೋಧಕ ಶಕ್ತಿ ಕುಂದಲು ಹಾಗೂ ಸಾಂಕ್ರಾಮಿಕತೆ ಹೆಚ್ಚಾಗಲು ಕಾರಣವಾಗುತ್ತದೆ. ಈ ರೂಪಾಂತರಿತ ವೈರಸ್‌ಗಳು 15ರಿಂದ 20 ಮಾದರಿಗಳಲ್ಲಿ ಪತ್ತೆಯಾಗಿವೆ. ಇದು ಈ ಹಿಂದಿನ ಆತಂಕಕಾರಿ ಪ್ರಬೇಧಕ್ಕೆ ಹೋಲಿಕೆಯಾಗುತ್ತಿಲ್ಲ ಎಂದು ಸಚಿವಾಲಯ ಹೇಳಿದೆ. ಅವಳಿ ರೂಪಾಂತರಿತ ಪ್ರಬೇಧವಲ್ಲದೆ, ಇಂಗ್ಲೆಂಡ್, ಬ್ರೆಝಿಲ್, ದಕ್ಷಿಣ ಆಫ್ರಿಕಾ ಪ್ರಬೇಧ ಸೇರಿದಂತೆ 770 ಆತಂಕಕಾರಿ ಪ್ರಬೇಧಗಳು ಪತ್ತೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ. ಆದರೆ, ಪತ್ತೆಯಾದ ಅವಳಿ ರೂಪಾಂತರಿತ ಪ್ರಬೇಧ ಹಾಗೂ ಇತರ ಆತಂಕಕಾರಿ ಪ್ರಬೇಧದ ಪ್ರಮಾಣ ಇತ್ತೀಚೆಗೆ ಕೊರೋನ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣ ಎಂಬುದನ್ನು ಸಮರ್ಥಿಸುತ್ತಿಲ್ಲ.
‘‘ಆತಂಕಕಾರಿ ಪ್ರಬೇಧ ಹಾಗೂ ಹೊಸ ಅವಳಿ ರೂಪಾಂತರಿತ ಪ್ರಬೇಧ ಭಾರತದಲ್ಲಿ ಪತ್ತೆಯಾಗಿವೆ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಏರಿಕೆಯನ್ನು ಸಾಬೀತುಪಡಿಸಲು ಅಥವಾ ನೇರ ಸಂಬಂಧ ಕಲ್ಪಿಸಲು ಅಥವಾ ತೀವ್ರಗತಿಯ ಏರಿಕೆಯನ್ನು ವಿವರಿಸುವಷ್ಟು ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ವಿಶ್ಲೇಷಿಸಲು ಜೆನೋಮಿಕ್ ಸೀಕ್ವೆನ್ಸಿಂಗ್ ಹಾಗೂ ಎಪಿಡೆಮಿಯೋಲಾಜಿಕಲ್ ಅಧ್ಯಯನ ಮುಂದುವರಿಸಲಾಗಿದೆ’’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.







