ಉತ್ಪಾದನೆ ಕುಂಠಿತ: ಚೇತರಿಕೆ ಕಾಣದ ಕುಕ್ಕುಟೋದ್ಯಮ!
ಕೋಳಿ ಮಾಂಸ ದರದಲ್ಲಿ ಗಣನೀಯ ಏರಿಕೆ
ಮಂಗಳೂರು, ಮಾ.24: ಕೋಳಿಗಳ ಉತ್ಪಾದನೆಯ ಕುಂಠಿತದಿಂದ ಕುಕ್ಕುಟೋದ್ಯಮ ಚೇತರಿಕೆ ಕಾಣುತ್ತಿಲ್ಲ. ಅದರ ನೇರ ಪರಿಣಾಮ ಕೋಳಿ ಮಾಂಸ ಪ್ರಿಯರ ಮೇಲಾಗಿದೆ. ಅಂದರೆ, ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಕೋಳಿ ಗಳು ಮಾರುಕಟ್ಟೆಯಲ್ಲಿಲ್ಲದ ಕಾರಣ ಸಹಜವಾಗಿ ಕೋಳಿ ಮಾಂಸದ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದು ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯ ಮಟ್ಟದಲ್ಲೂ ಇದರ ನೇರ ಪರಿಣಾಮ ಕಾಣಬಹುದಾಗಿದೆ.
ವರ್ಷದ ಆರಂಭದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಅದರಿಂದ ಭಯಗೊಂಡ ಕೋಳಿ ಮಾಂಸ ಪ್ರಿಯರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದರು. ಆ ಬಳಿಕ ಬಿರುಬಿಸಿಲು ಕಾಣಿಸಿತು. ಅದರ ಹೊಡೆತ ಕುಕ್ಕುಟೋದ್ಯಮದ ಮೇಲೆ ಬಿದ್ದಿದೆ. ಅಂದರೆ ಕೋಳಿ ಉತ್ಪಾದನೆಯ ಕುಸಿತವು ಕುಕ್ಕುಟೋದ್ಯಮ ಕ್ಷೇತ್ರದಲ್ಲಿ ದರ ಏರಿಕೆಗೆ ಕಾರಣ ವಾಗಿದೆ.
ಪ್ರತಿ ವರ್ಷದ ಉಷ್ಣಾಂಶಕ್ಕಿಂತ ಈ ಬಾರಿ ದ್ವಿಗುಣ ಉಷ್ಣಾಂಶವಿದೆ. ಹಾಗಾಗಿ ಕೋಳಿ ಮರಿಗಳನ್ನು ಭಾರೀ ಪ್ರಮಾಣದಲ್ಲಿ ಸಾಕಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಕೋಳಿಯ ಉತ್ಪಾದನೆಯ ಕುಸಿತದ ಪರಿಣಾಮ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗಿದೆ.
ಇದೀಗ ಮದುವೆ ಮತ್ತಿತರ ಶುಭ ಕಾರ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ. ಕುಕ್ಕುಟೋದ್ಯಮಿಗಳು ಕೋಳಿ ಉತ್ಪಾದನೆ ಕುಂಠಿತಗೊಳಿಸಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಕೋಳಿ ಮಾಂಸವು ಲಭ್ಯವಿಲ್ಲ. ಹಾಗಾಗಿ ಕೋಳಿ ಮಾರಾಟಗಾರರು ದರ ಹೆಚ್ಚುತ್ತಲೇ ಇದ್ದಾರೆ. ವ್ಯಾಪಾರಿಗಳು ಹೇಳಿದಷ್ಟು ಹಣವನ್ನು ಕೊಟ್ಟು ಖರೀದಿಸುವುದು ಗ್ರಾಹಕರಿಗೆ ಅನಿವಾರ್ಯವಾಗಿದೆ ಎಂಬ ಮಾತು ಕುಕ್ಕುಟೋದ್ಯಮ ವಲಯದಲ್ಲಿ ಕೇಳಿ ಬರುತ್ತಿದೆ.
ಬೇಸಿಗೆಯಲ್ಲಿ ಕೋಳಿಗಳು ಕಡಿಮೆ ಪ್ರಮಾಣದ ಆಹಾರ ತಿನ್ನುತ್ತದೆ. ಇದರಿಂದ 35-37 ದಿನಗಳಲ್ಲಿ 2 ಕೆಜಿ ಬರಬೇಕಾದ ಕೋಳಿಯ ತೂಕ ಬೇಸಿಗೆಯಲ್ಲಿ 40ರಿಂದ 44 ದಿನಗಳು ಆಗುತ್ತದೆ. ಕೋಳಿ ಸಾಕಾಣೆದಾರರು ಕೂಡ ತುಂಬಾ ಎಚ್ಚರಿಕೆ ವಹಿಸಿ ಸಾಕುತ್ತಾರೆ. ಇದರಿಂದಾಗಿ ಉತ್ಪಾದನೆ ಕಡಿಮೆಯಾಗಿ ದರ ಏರಿಕೆಯಾಗುತ್ತಿದೆ ಎಂದು ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಬ್ರಿಡರ್ಸ್ ಅಸೋಸಿಯೇಶನ್( ಕೆಪಿಎ್ಬಿಎ) ಅಧ್ಯಕ್ಷ ಡಾ. ಸುಶಾಂತ್ ರೈ ಹೇಳಿದರು.
ಬೇಸಿಗೆಯಲ್ಲಿ ಕೋಳಿಗಳ ಸಾವಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತದೆ. ಬ್ರಾಯ್ಲರ್ ಕೋಳಿಗಳು ಇತರ ಋುತುವಿನಲ್ಲಿ ಶೇ.5ರಷ್ಟು ಸತ್ತರೆ ಬೇಸಿಗೆಯಲ್ಲಿ ಅದರ ಪ್ರಮಾಣ ಶೇ.10ರಿಂದ 15 ರವರೆಗೆ ಇರುತ್ತದೆ. ಜತೆಗೆ ಶ್ವಾಸಕೋಶದ ಸಮಸ್ಯೆ, ರಾಣಿಕೇತು ಕಾಯಿಲೆ ಬಂದರೆ ಮೂರು ತಿಂಗಳು ಫಾರ್ಮ್ ಮುಚ್ಚಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ 1 ಸಾವಿರ ಮರಿಗಳ ಬದಲು 800 ಮರಿಗಳನ್ನು ಸಾಕಿ ಎಂದು ತಜ್ಞರು ಕೋಳಿ ಸಾಕಾಣೆ ದಾರರಿಗೆ ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಇತರ ಸಮಯದಲ್ಲಿ ಕೋಳಿಯ ಸಾಮಾನ್ಯ ತೂಕ ಎರಡರಿಂದ ಎರಡುವರೆ ಕೆಜಿ ಇರುತ್ತದೆ. ಆದರೆ ಬೇಸಿಗೆಯಲ್ಲಿ 1.8ರಿಂದ 2 ಕೆಜಿ ತೂಗುತ್ತದೆ. ಕೋಳಿಯ ದರ ಹೆಚ್ಚಳವಾದರೆ ಕೋಳಿ ಮರಿಗಳಿಗೂ ದರ ಏರುತ್ತದೆ. ಅಲ್ಲದೆ ಫಾರ್ಮ್‌ನಲ್ಲಿ ನೀರಿನ ಕೊರತೆ ಸಹಿತ ಹಲವು ಕಾರಣಗಳು ಬೇಸಿಗೆಯಲ್ಲಿ ಕುಕ್ಕುಟೋದ್ಯಮವನ್ನು ಸದಾ ಕಾಡುತ್ತಿರುತ್ತದೆ. ಈ ಮಧ್ಯೆ ಮಳೆ ಸುರಿದರೆ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಪ್ರಾಣಿ ರೋಗ ತಪಾಸಣೆ ಕೇಂದ್ರದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅಭಿಪ್ರಾಯಪಡುತ್ತಾರೆ.







