ಕಲಬುರಗಿ-ಮಂಗಳೂರು ವಿಮಾನ ಸೇವೆ ಆರಂಭಕ್ಕೆ ಆಗ್ರಹ
ಮಂಗಳೂರು, ಮಾ.24: ಕಲಬುರಗಿ ಮತ್ತು ಮಂಗಳೂರು ಮಧ್ಯೆ ಬೆಂಗಳೂರು ದಾರಿಯಾಗಿ ವಿಮಾನ ಸೇವೆ ಪ್ರಾರಂಭಿಸುವಂತೆ ಕೇಂದ್ರದ ನಾಗರಿಕ ವಿಮಾನ ಯಾನ ಖಾತೆಯ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಲಬುರಗಿಯ ದ.ಕ. ಸಂಘದ ಅಧ್ಯಕ್ಷ ಡಾ.ಸದಾನಂದ ಪೆರ್ಲ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಂಸದರು ಕೇಂದ್ರ ಸಚಿವರಿಗೆ ಈ ಪತ್ರ ಬರೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ನೂರಾರು ಜನರು ಕರಾವಳಿ ಜಿಲ್ಲೆಗಳಿಗೆ ಶಿಕ್ಷಣ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಪ್ರವಾಸಿ ಕೇಂದ್ರಗಳಿಗೆ ನಿರಂತರ ಪ್ರಯಾಣ ಮಾಡುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಭೂಕುಸಿತ ಮತ್ತು ರಸ್ತೆಗಳ ದುಸ್ಥಿತಿಯಿಂದ ರಸ್ತೆ ಹಾಗೂ ರೈಲು ದಾರಿಯಾಗಿ ಸಂಚಾರ ಕಷ್ಟಸಾಧ್ಯವಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಕಲಬುರಗಿುಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಮಾನ ಯಾನ ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕು. ಪ್ರವಾಸೋದ್ಯಮ, ವಾಣಿಜೋಧ್ಯಮ, ಶಿಕ್ಷಣ ರಂಗದ ಉತ್ತೇಜನಕ್ಕಾಗಿ ಈ ಎರಡು ನಗರಗಳ ಮಧ್ಯೆ ವಿಮಾನ ಯಾನ ತುರ್ತು ಅಗತ್ಯವಾಗಿದೆ ಎಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.





