ಸಿಮ್ಸ್ ನಿರ್ದೇಶಕರ ಮೇಲೆ ಕಿಕ್ ಬ್ಯಾಕ್ ಆರೋಪ ಮಾಡಿದ ಕಾಂಗ್ರೆಸ್ ವಕ್ತಾರ ಕೆಬಿ ಪ್ರಸನ್ನಕುಮಾರ್

ಶಿವಮೊಗ್ಗ: ಸಿಮ್ಸ್ ನಿರ್ದೇಶಕರಾದ ಡಾ.ಸಿದ್ದಪ್ಪ ತಮ್ಮ ಅಧಿಕಾರವಧಿಯಲ್ಲಿ 120 ಕೋಟಿ ರೂ. ಗಳ ಚೆಕ್‌ಗೆ ಸಹಿ ಹಾಕಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಸಿದ್ದಪ್ಪನವರ ನೇಮಕಾತಿಯೇ ತಪ್ಪಾಗಿದೆ. ವೈದ್ಯಕೀಯ ಕಾಲೇಜಿನ ಬೈಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅವರ ನೇಮಕಾತಿ ಮಾಡಲಾಗಿದೆ. ಬೈಲಾದ ಪ್ರಕಾರ ನಿರ್ದೇಶಕರ ನೇಮಕಾತಿಯು 58 ವರ್ಷವನ್ನು ಮೀರಿದವರಿಗೆ ನೀಡಬಾರದು. ಆದರೆ ಈಗ ಅವರಿಗೆ 68 ವರ್ಷವಾಗಿದೆ. ೧೦ ವರ್ಷಗಳ ವ್ಯತ್ಯಾಸವಿದ್ದರೂ ಕೂಡ ಇವರನ್ನು ಸಿಮ್ಸ್‌ಗೆ ತಂದು ಕೂರಿಸಿದ್ದಾದರೂ ಏಕೆ ಎಂಬ ಸಂಶಯ ಬರುತ್ತದೆ ಎಂದರು.
ಡಾ.ಸಿದ್ದಪ್ಪ ಸಿಮ್ಸ್ ನಿರ್ದೇಶಕರಾಗಿ ನೇಮಕವಾದ ನಂತರ ಅಧಿಕಾರ ಹಾಗೂ ಹಣದ ದುರುಪಯೋಗಪಡಿಸಿಕೊಂಡಿದ್ದಾರೆ. ಡಾ.ಸಿದ್ದಪ್ಪ ನೇಮಕವಾದ 10 ತಿಂಗಳಲ್ಲಿ ಸುಮಾರು 120 ಕೋಟಿ ರೂ ಗಳ ಚೆಕ್ ಗೆ ಸಹಿ ಹಾಕಿದ್ದಾರೆ. ಚೆಕ್‌ಗೆ ಸಹಿ ಹಾಕಲು ಇವರಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ, ಆದರೆ ನೂರಾರು ಕೋಟಿ ರೂಪಾಯಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ. ಕಿಕ್ ಬ್ಯಾಕ್ ಪಡೆದ ಹಣವನ್ನು ನಿರ್ದೇಶಕರಾಗಿ ನೇಮಿಸಲು ಕಾರಣರಾದವರಿಗೆ ಕೊಟ್ಟಿರುವ ಸಾಧ್ಯತೆ ಇದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕೊರೋನ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾರೆ. 400 ರೂ. ಬೆಲೆಯ ಪಿಪಿಇ ಕಿಟ್ ನ್ನು 2100 ರೂ.ಗಳಿಗೆ ಖರೀದಿ ಮಾಡಿದ್ದಾರೆ. ಐಸಿಯುಗಳಿಗೆ ಖರೀದಿಸಿದ ದುಬಾರಿ ಬೆಲೆಯ ಕಾಟ್ ಗಳು ಮುರಿದು ಹೋಗಿವೆ. ಎನ್ -೯೫ ಮಾಸ್ಕ್ ನಿಂದ ಹಿಡಿದು ವೈದ್ಯಕೀಯ ಉಪಕರಣಗಳು ,ಔಷಧಿ ಖರೀದಿವರೆಗೆ ಭ್ರಷ್ಟಾಚಾರ ನಡೆದಿದ್ದು,ಗುತ್ತಿಗೆದಾರರಿಂದಲೂ ಕೋಟ್ಯಾಂತರ ರೂಗಳ ಕಿಕ್ ಬ್ಯಾಕ್ ಪಡೆದುಕೊಂಡಿರುವ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿದರು.
ಮೆಡಿಕಲ್ ಕಾಲೇಜು ಮತ್ತು ಮೆಗ್ಗಾನ್ ಆಸ್ಪತ್ರೆಗಳ ಕಾಮಗಾರಿಗಳು ಲೋಕೋಪಯೊಗಿ ಇಲಾಖೆ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ನಡೆಯುತ್ತಿದ್ದುದ್ದನ್ನು ತಪ್ಪಿಸಿ ಸಿವಿಲ್ ಇಂಜಿನಿಯರ್‌ಗಳು, ಎಲೆಕ್ಟ್ರಿಕಲ್ ಇಂಜಿನಿಯರ್‌ಗಳು, ಬಯೋಮೆಡಿಕಲ್ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡು ಗೋಲ್‌ಮಾಲ್ ವ್ಯವಹಾರ ನಡೆಸುತ್ತಿದ್ದಾರೆ. ಗುಣಮಟ್ಟದ ಕಾಮಗಾರಿಗಳಿಗಾಗಿ ಪಿಡಬ್ಲೂಡಿ ಅಧಿಕಾರಿಗಳ ಮೆಲುಸ್ತುವಾರಿಯಲ್ಲಿ ಪರಿಶೀಲನೆ ನಡೆಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಪ್ರಭಾವ ಈ ಎಲ್ಲದರ ಮೇಲಿದೆ. ಈ ಹಿಂದೆ ಸಿಮ್ಸ್ ನಿರ್ದೇಶಕರಾಗಿದ್ದ ಡಾ.ಲೇಪಾಕ್ಷಿಯವರು ಇರುವ ತನಕ ನಾನು ಸಿಮ್ಸ್‌ಗೆ ಕಾಲಿಡುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ಜನರು ಇದು ಒಳ್ಳೆಯದಕ್ಕೇ ಎಂದು ಭಾವಿಸಿದ್ದರು. ಆದರೆ ಡಾ.ಸಿದ್ದಪ್ಪನವರ ನೇಮಕ ಕಾನೂನು ಬಾಹಿರವಾಗಿ ಆದಾಗಲೆ ಈ ಸತ್ಯ ಹೊರಗೆ ಬಂತು ಕೆ.ಎಸ್.ಈಶ್ವರಪ್ಪನವರು ತಮ್ಮ ಸ್ವಾರ್ಥಕ್ಕಾಗಿ ಸಿದ್ದಪ್ಪನವರನ್ನು ಬೈಲಾದ ನಿಯಮಾವಳಿಗೆ ವಿರುದ್ಧವಾಗಿ ನೇಮಕವಾಗಲು ಕಾರಣವಾಗಿದ್ದಾರೆ ಎಂಬ ಮಾತುಗಳು ಈಗ ಕೇಳಿಬರುತ್ತಿದೆ.
ಹೀಗಾಗಿ ಅಕ್ರಮವಾಗಿ ನೇಮಕವಾಗಿರುವ ಡಾ.ಸಿದ್ಧಪ್ಪ ಅವರ ನೇಮಕಾತಿ ಮತ್ತು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು. ಒಂದು ತಿಂಗಳೊಳಗೆ ಈ ಹಕ್ಕೊತ್ತಾಯ ಈಡೇರದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಯು.ಶಿವಾನಂದ, ಪ್ರವೀಣ್ ಕುಮಾರ್, ದೀಪಕ್‌ಸಿಂಗ್, ಕೆ.ರಂಗನಾಥ್, ರಘು, ಆಸೀಫ್, ಪುಷ್ಪಲತಾ, ಮಂಜುನಾಥ್, ಲಕ್ಷ್ಮಣ ಮತ್ತಿತರರಿದ್ದರು.







