ಪಡುಬಿದ್ರಿ: ಕಸ ವಿಲೇವರಿಯಾಗದೆ ದುರ್ನಾತ; ಗ್ರಾ.ಪಂ. ವಿರುದ್ಧ ಆಕ್ರೋಶ

ಪಡುಬಿದ್ರಿ: ಕಸ ವಿಲೇವರಿಗೆಂದು ನಿರ್ಮಾಣಗೊಂಡಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿ ಎದುರಿನಲ್ಲಿರುವ ಎಸ್‍ಎಲ್‍ಆರ್‍ಎಮ್ ಘಟಕದಲ್ಲಿ ಸಮರ್ಪಕ ಕಸ ವಿಲೇವರಿಯಾಗದೆ ದುರ್ನಾತ ಬೀರುತಿದ್ದು, ಪಂಚಾಯಿತಿಗೆ ಬರುವ ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ ಗ್ರಾಮ ಪಂಚಾಯಿತಿಯ ಎದುರಿನಲ್ಲಿ 2018ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಎಸ್‍ಎಲ್‍ಆರ್‍ಎಮ್ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ಒಣ ಹಾಗೂ ಹಸಿಕಸವನ್ನು ವಿಲೇವರಿ ಮಾಡಲಾಗುತಿತ್ತು. ಕಳೆದ ಕೆಲವು ತಿಂಗಳಿನಿಂದ ಇಲ್ಲಿ ಕಸ ಸಂಗ್ರಹಿಸಲಾಗುತಿದ್ದು, ಸಮಪರ್ಕವಾಗಿ ಕಸ ವಿಲೇವರಿಯಾಗದೆ ದುರ್ನಾತ ಬೀರುತಿದೆ. ಇದರಿಂದ ಗ್ರಾಮ ಪಂಚಾಯಿತಿಗೆ ಬರುವ ಗ್ರಾಮಸ್ಥರು ಮೂಗು ಮುಚ್ಚಿಕೊಂಡೇ ಬರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಗ್ರಾ.ಪಂ. ಎದುರಲ್ಲಿ ಕಸ ಸಂಗ್ರಹ ಮಾಡುವ ಮೂಲಕ ಇದೀಗ ದುರ್ನಾತ ಬೀರುತ್ತಿದೆ. ಎಸ್‍ಎಲ್‍ಆರ್‍ಎಮ್ ಘಟಕ ನಿರ್ಮಿಸಿ ಕಸ ವಿಲೇವರಿ ಮಾಡಿಸಬೇಕಾದ ಪಂಚಾಯಿತಿ ಮೌನವಾಗಿದೆ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಒತ್ತಾಯಿಸಿದ್ದಾರೆ.
ಒಣ ಕಸಕ್ಕೆ ಪರಿಹಾರ: ಈಗಿರುವ ಒಣ ಕಸವನ್ನು 15 ದಿನಗಲ್ಲಿ ನಿಟ್ಟೆಯಲ್ಲಿ ನಿರ್ಮಾಣಗೊಂಡಿರುವ ಎಮ್‍ಆರ್‍ಎಫ್ ಘಟಕಕ್ಕೆ ಸ್ಥಳಾಂತರಿಸಲಾಗುವುದು. ಹೊಸದಾಗಿ ನಿರ್ಮಾಣಗೊಂಡಿರುವ ಈ ಘಟಕಕ್ಕೆ ಪ್ರತಿ ದಿನ 3ಟನ್‍ನಷ್ಟು ಒಣ ಕಸ ಬೇಕಾಗುತ್ತದೆ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ.
ಘಟಕಕ್ಕೆ ಜಾಗ ಮಂಜೂರು: ಹಸಿ ಕಸ ವಿಲೇವರಿಗೆ ಈಗಾಗಲೇ ಜಿಲ್ಲಾಧಿಕಾರಿ ಅಬ್ಬೇಡಿಯಲ್ಲಿ 19 ಸೆಂಟ್ಸ್ ಜಾಗವನ್ನು ಸರ್ವೇ ನಂಬ್ರ 77/37 ಸ್ಥಳ ಮಂಜೂರು ಮಾಡಿದ್ದಾರೆ. ಇನ್ನು ಎರಡು ತಿಂಗಳಲ್ಲಿ ಘಟಕ ನಿರ್ಮಾಣ ವಾಗಲಿದೆ. ಆದರೆ ಸ್ಥಳೀಯರಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಎಂದು ಪಿಡಿಓ ಪಂಚಾಕ್ಷರಿ ಸ್ವಾಮಿ ಕೆರಿಮಠ ಹೇಳಿದ್ದಾರೆ.
ಸ್ಥಳೀಯರ ವಿರೋಧ: ಹೊಸದಾಗಿ ಕಸ ವಿಲೇವರಿ ಘಟಕ ನಿರ್ಮಿಸಲು ಎನ್‍ಟಿಪಿಸಿ ಗೋಡೋನ್ ಬಳಿ ಗ್ರಾಮ ಪಂಚಾಯಿತಿ ಸಿದ್ದತೆ ನಡೆಸುತ್ತಿದೆ. ಗ್ರಾಮ ಪಂಚಾಯಿತಿ ಎದುರಲ್ಲೇ ಕಸ ವಿಲೇವರಿ ಮಾಡದೆ ಇರುವ ಪಂಚಾಯಿತಿ ಇನ್ನು ಅಬ್ಬೇಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಸ ವಿಲೇವರಿ ಘಟಕವನ್ನು ಹೇಗೆ ನಿರ್ವಹಿಸು ತ್ತದೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಇದು ಜನವಸತಿ ಪ್ರದೇಶವಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವರಿ ಘಟಕ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಲೋಕೇಶ್ ಎಚ್ಚರಿಸಿದ್ದಾರೆ.







