ಎಸ್‍ಇಪಿ, ಟಿಎಸ್‍ಪಿ ಅನುದಾನ ವಿವಿಗಳು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು: ಕಾರಜೋಳ
ಬೆಂಗಳೂರು, ಮಾ.24: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಸೇರಿದಂತೆ ಇತರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಎಸ್‍ಇಪಿ, ಟಿಎಸ್‍ಪಿಯಡಿ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ರಾಜ್ಯದ ಒಂಬತ್ತು ವಿವಿಗಳು ಇತರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಎಚ್.ಎಂ.ರಮೇಶ್‍ಗೌಡ ಹಾಗೂ ಕಾಂಗ್ರೆಸ್‍ನ ಪಿ.ಆರ್.ರಮೇಶ್ ಅವರು ಜಂಟಿಯಾಗಿ ಪ್ರಶ್ನೆ ಕೇಳಿ ಬೀದರ್‍ನ ಪಶುಸಂಗೋಪನೆ ವಿಶ್ವವಿದ್ಯಾಲಯ ಕುಲಪತಿ ಅವರು ಹಣ ದುರುಪಯೋಗ ಪಡಿಸಿಕೊಡಿದ್ದಾರೆ ಎಂದು ಆರೋಪಿಸಿದರು. ಈ ಪ್ರಶ್ನೆಗೆ ಉತ್ತರ ನೀಡಲು ಕಾಲಾವಕಾಶ ನೀಡುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದರು.
ಇದೇ ಪ್ರಶ್ನೆಗೆ ಸಚಿವರು ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ ಎಂದು ಸದಸ್ಯ ರಮೇಶ್‍ಗೌಡ ಆರೋಪಿಸಿದರು. ಅಲ್ಲಿ ಕೇಳಲಾದ ಪ್ರಶ್ನೆಯೇ ಬೇರೆ, ನಾವು ನೀಡಿರುವ ಉತ್ತರವೂ ಬೇರೆ ಎಂದು ಸಚಿವ ಪ್ರಭು ಚಹ್ವಾಣ್ ಸಮರ್ಥಿಸಿಕೊಂಡಾಗ, ಎರಡು ಪ್ರಶ್ನೆ ಮತ್ತು ಉತ್ತರಗಳು ಒಂದೇ ಎಂದು ವಾದಿಸಿದ ಸದಸ್ಯ ರಮೇಶ್‍ಗೌಡ, ಇದನ್ನು ಹಕ್ಕುಚ್ಯುತಿಗೆ ಒಪ್ಪಿಸಿ, ಒಂದು ವೇಳೆ ಪ್ರಶ್ನೆ, ಉತ್ತರ ಬೇರೆ ಇದ್ದರೆ ಸುಳ್ಳು ಹೇಳಿದವರಿಗೆ ದಂಡನೆಯಾಗಲಿ ಎಂದು ಸವಾಲು ಹಾಕಿದರು.
ಆಗ ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಉಪಯೋಜನೆಯ ಎಸ್ಸಿ, ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳ ಊಟ, ವಸತಿ, ಪುಸ್ತಕ ಸೇರಿದಂತೆ ಇತರ ಮೂಲ ಸೌಲಭ್ಯಗಳಿಗಾಗಿ ಸರಕಾರ ಹಣ ಬಿಡುಗಡೆ ಮಾಡಿದೆ. ಆದರೆ ಅದನ್ನು ಒಂಬತ್ತು ವಿವಿಗಳ ಕುಲಪತಿಗಳು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.
ಕೆಲವರು ತಮ್ಮ ಕಚೇರಿಯ ನವೀಕರಣಕ್ಕೆ ಬಳಸಿದ್ದರೆ ಇನ್ನೂ ಕೆಲವರು ವಿವಿಯ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿದ್ದಾರೆ. ಮತ್ತೂ ಕೆಲವರು ವೈಯಕ್ತಿಕ ಖಾತೆಯಲ್ಲಿ ಹಣ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಚರ್ಚೆ ಮಾಡಲು ಅಧಿವೇಶನ ಮುಗಿದ ಬಳಿಕ ವಿವಿಗಳ ಕುಲಪತಿಗಳ ಸಭೆ ಕರೆಯಲು ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಆಗ ಮಧ್ಯ ಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಉಪಯೋಜನೆಯ ಹಣವನ್ನು ಇತರೆ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಪರಾಧ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ಎಂದು ಒತ್ತಾಯಿಸಿದರು.







