ಮುಂಬೈ ನಿವಾಸದಲ್ಲಿ ಸೆಬಿ ಅಧಿಕಾರಿ ಆತ್ಮಹತ್ಯೆ

ಮುಂಬೈ: ಸೆಕ್ಯುರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ)ಅಧಿಕಾರಿ ಬುಧವಾರ ಮಹಾರಾಷ್ಟ್ರದ ಪೂರ್ವ ಮುಂಬೈನ ತಿಲಕ್ ನಗರ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯನ್ನು ಅಭಿಷೇಕ್ ಸಂಪತ್ ರಾವ್ ದೇಶ್ ಮುಖ್(25)ಎಂದು ಗುರುತಿಸಲಾಗಿದ್ದು, ಇವರು ಮುಂಬೈನ ಸೆಬಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದರು. ಚೆಂಬೂರ್ ನ ತಿಲಕ್ ನಗರದಲ್ಲಿರುವ ತನ್ನ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೊಠಡಿಯ ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿದ್ದ ದೇಶ್‍ಮುಖ್ ರನ್ನು ಸ್ನೇಹಿತ ರಾಕೇಶ್ ಮೋಹನ್ ಅವರು ರಾಜಾವಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಿಸುವ ಮೊದಲೇ ದೇಶ್‍ಮುಖ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ತಿಲಕ್ ನಗರ ಪೊಲೀಸರು ಸೆಕ್ಷನ್ 174ರ ಅಡಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿ, ರಾಕೇಶ್ ಮೋಹನ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಯಿಂದ ಪೋಸ್ಟ್ ಮಾರ್ಟಂ ವರದಿ ಸ್ವೀಕರಿಸಿದ ಬಳಿಕ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.







