ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ನಿಧನ

ಉಡುಪಿ, ಮಾ.25: ಕೊಂಕಣ ರೈಲ್ವೆಯ ಪ್ರಯೋಜನವನ್ನು ಕರಾವಳಿ ಭಾಗದ ಜನತೆಗೆ ದೊರಕಿಸುವಲ್ಲಿ ಅವಿರತ ಹೋರಾಟ ನಡೆಸಿ ಯಶಸ್ವಿ ಯಾದ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಹಾಗೂ ಭಾರತೀಯ ಭೂಸೇನೆಯ ನಿವೃತ್ತ ಹಿರಿಯ ಯೋಧ ಆರ್.ಎಲ್. ಡಯಾಸ್ ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ತಡರಾತ್ರಿ ನಿಧನರಾದರು. ಅವರಿಗೆ 88 ವರ್ಷ ಪ್ರಾಯವಾಗಿತ್ತು.
ಮಣಿಪಾಲ ಸಮೀಪದ ಪರ್ಕಳದಲ್ಲಿ ಜನಿಸಿದ ರಾಬರ್ಟ್ ಲೂಯಿಸ್ ಡಯಾಸ್ (ಆರ್.ಎಲ್.ಡಯಾಸ್) ಎರಡು ದಶಕಗಳ ಕಾಲ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಅವರು ರಾಜ್ಯ ಅರಣ್ಯ ಇಲಾಖೆಯಲ್ಲಿ ಆರ್‌ಎಫ್‌ಓ ಆಗಿ ದುಡಿದಿದ್ದರು.
ನಿವೃತ್ತಿಯ ಬಳಿಕ 2000ದಿಂದ ಈವರೆಗೆ ಅವರು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷರಾಗಿದ್ದು, ಹಲವು ಸಂಘಟಿತ ಹೋರಾಟದ ಮೂಲಕ ಉಡುಪಿ ಹಾಗೂ ಕರಾವಳಿಗೆ ರೈಲ್ವೆ ಸೇವೆ ಲಭಿಸುವಂತೆ ಮಾಡಿದ್ದರು. ಡಯಾಸ್ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ ವೈಯಕ್ತಿಕ ಪಿಐಎಲ್‌ನಿಂದಾಗಿ ಬೆಂಗಳೂರು ಹಾಗೂ ಕಣ್ಣೂರು ನಡುವೆ ಓಡುತಿದ್ದ ರೈಲು ಬೆಂಗಳೂರಿನಿಂದ ಕಾರವಾರದವರೆಗೆ ಓಡಾಟ ನಡೆಸಲು ಸಾಧ್ಯವಾಯಿತು.
ಅಲ್ಲದೇ ಮುಂಬೈಯಿಂದ ಮಡಗಾಂವ್‌ವರೆಗೆ ಸಂಚರಿಸುತಿದ್ದ ರೈಲು, 15 ಗಂಟೆಗಳ ಕಾಲ ಗೋವಾದಲ್ಲಿ ನಿಲ್ಲುವ ಬದಲು ಮಂಗಳೂರು ಜಂಕ್ಷನ್‌ವರೆಗೆ -ಮಂಗಳೂರು ಎಕ್ಸ್‌ಪ್ರೆಸ್ ಆಗಿ- ಓಡಾಟ ನಡೆಸಲು ಸಾಧ್ಯವಾಗಿದ್ದು, ಆರ್.ಎಲ್.ಡಯಾಸ್ ಅವರು ಹೈಕೋರ್ಟ್‌ನಲ್ಲಿ ನಡೆಸಿದ ಮತ್ತೊಂದು ಹೋರಾಟದಿಂದ ಎಂಬುದು ಉಲ್ಲೇಖಾರ್ಹ.
ಅಲ್ಲದೇ ಉಡುಪಿ ಇಂದ್ರಾಳಿ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳಲು ಡಯಾಸ್ ಅವರು ಉಡುಪಿ ರೈಲ್ವೆ ಯಾತ್ರಿ ಸಂಘದ ಮೂಲಕ ನಡೆಸಿದ ನಿರಂತರ ಪ್ರಯತ್ನಗಳೇ ಕಾರಣವಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕಾಂಕ್ರಿಟ್ ಬೆಂಚ್, ಪ್ರಯಾಣಿಕರ ಸುಗಮ ಸಂಚಾರಕ್ಕೆ ನಿರ್ಮಿತವಾದ ಓವರ್‌ಬ್ರಿಡ್ಜ್ ಇವರ ಪ್ರಯತ್ನದ ಫಲಗಳಾಗಿವೆ. ಕೊಂಕಣ ರೈಲ್ವೆ ಹಾಗೂ ದಕ್ಷಿಣ ರೈಲ್ವೆಗಳು ಇವರಿಗೆ ನೀಡಿದ ಎರ್ಮಜೆನ್ಸ್ ಕೋಟಾದ ವಿಶೇಷ ಸೌಲಭ್ಯದಡಿ ಅವರು ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ದೇಶದ ವಿವಿದೆಡೆ ಪ್ರಯಾಣಿಸುವ ರೋಗಿಗಳಿಗೆ ರೈಲಿನಲ್ಲಿ ತುರ್ತಾಗಿ ಸಂಚರಿಸಲು ನೀಡುತಿದ್ದ ಸಹಾಯದಿಂದ ಸಾವಿರಾರು ಮಂದಿ ಪ್ರಯೋಜನ ಪಡೆದಿದ್ದಾರೆ.
ಕೊಂಕಣ ರೈಲ್ವೆ ಸೇರಿದಂತೆ ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಲವು ಸಮಸ್ಯೆಗಳಿಗೆ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ಕೆಲಸ ಮಾಡಿಸುವಲ್ಲಿ ಯಶಸ್ಸು ಕಂಡಿದ್ದರು. ರೈಲ್ವೆ ಸಂಬಂಧಿತ ಹೋರಾಟಗಳ ಹೊರತಾಗಿ ಇತರ ಕ್ಷೇತ್ರಗಳಲ್ಲೂ ಡಯಾಸ್ ಅವರ ಸಾಮಾಜಿಕ ಕಳಕಳಿ ನಿರಂತರವಾಗಿದ್ದು ಪರ್ಕಳ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಸ್ಪಂದನೆ, ಉಡುಪಿಯಲ್ಲಿ ನರ್ಮ್ ಬಸ್‌ಗಳ ಓಡಾಟದ ಹಿಂದೆ ಅವರ ಪಾತ್ರವೂ ಇತ್ತು. ಈಗ ಚಾಲನೆಯಲ್ಲಿರುವ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗೆ ಅವರು ನಡೆಸಿದ ಹೋರಾಟಗಳು ಜನ ಮಾನಸ ದಲ್ಲಿ ನೆಲೆಯೂರಿದೆ. ಆರ್.ಎಲ್.ಡಯಾಸ್ ಅವರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರ ಅಲ್ಲದೇ ಅಪಾರ ಬಂಧುಮಿತ್ರರನ್ನು ಅಗಲಿರುತ್ತಾರೆ. ಅವರ ಅಂತಿಮ ಸಂಸ್ಕಾರ ರವಿವಾರ ಅಪರಾಹ್ನ 3:30ಕ್ಕೆ ಮಣಿಪಾಲದ ಕ್ರೈಸ್ಟ್ ಚರ್ಚ್ ಇಗರ್ಜಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಡಯಾಸ್‌ರ ನಿಧನಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ವಸಾಹಿ ಮುಂಬೈ ರೈಲ್ವೆಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿಸೋಜ, ಉಡುಪಿ ರೈಲ್ವೆ ಯಾತ್ರಿ ಸಂಘದ ಉಪಾಧ್ಯಕ್ಷ ಅಜಿತ್ ಶೆಣೈ, ಪ್ರ. ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಸಂಘದ ನಿರ್ದೇಶಕರುಗಳು, ಸದಸ್ಯರುಗಳು, ಉಡುಪಿ ಕೊಂಕಣ್ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಮಂಗಳೂರು ರೈಲ್ವೆಯ ಹಿರಿಯ ಅಧಿಕಾರಿ ಸುಧಾ ಕೃಷ್ಣಮೂರ್ತಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.







