ಈ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಹೆಲಿಕಾಪ್ಟರ್, ಒಂದು ಕೋಟಿ ರೂ., ಮೂರಂತಸ್ತಿನ ಮನೆ, ಚಂದ್ರಯಾನ ಆಫರ್!
ಪ್ರಣಾಳಿಕೆ ನೋಡಿ ಬೆಚ್ಚಿಬಿದ್ದ ಮತದಾರರು

ಚೆನ್ನೈ: ತಮಿಳುನಾಡಿನ ಮಧುರೈ ದಕ್ಷಿಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತುಳಂ ಸರವಣಂ ಎಂಬವರು ತಮ್ಮ ಪ್ರಣಾಳಿಕೆಯಲ್ಲಿ ಮತದಾರರಿಗೆ ನೀಡಿರುವ ಭರವಸೆಗಳು ಎಲ್ಲರ ಹುಬ್ಬೇರಿಸುವಂತಿವೆ.
ಪ್ರತಿ ಮನೆಗೆ ಒಂದು ಮಿನಿ ಹೆಲಿಕಾಪ್ಟರ್, ವಾರ್ಷಿಕ ರೂ. 1 ಕೋಟಿ ಠೇವಣಿ, ವಿವಾಹಗಳಿಗೆ ಚಿನ್ನಾಭರಣಗಳು ಹಾಗೂ ಒಂದು ಮೂರಂತಸ್ತಿನ ಮನೆ. ಇವು ಸರವಣನ್ ಅವರ ಆಶ್ವಾಸನೆಗಳಲ್ಲಿ ಕೆಲವೇ ಕೆಲವು. ಅವರ ಆಶ್ವಾಸನೆಗಳಲ್ಲಿ ಮತದಾರರಿಗೆ ಚಂದ್ರಯಾನವೂ ಸೇರಿದೆ. ಅವರು ಸ್ಪರ್ಧಿಸುತ್ತಿರುವ ಮಧುರೈ ದಕ್ಷಿಣ ಕ್ಷೇತ್ರದಲ್ಲಿ ಇನ್ನೂ 13 ಇತರ ಅಭ್ಯರ್ಥಿಗಳಿದ್ದಾರೆ.
ತಾವು ನೀಡಿರುವ ಆಶ್ವಾಸನೆಗಳ ಕುರಿತಂತೆ ಪ್ರತಿಕ್ರಿಯಿಸಿರುವ ಅವರು "ರಾಜಕೀಯ ಪಕ್ಷಗಳು ಮತದಾರರ ಓಲೈಕೆಗೆ ಉಚಿತ ವಸ್ತುಗಳನ್ನು ನೀಡುವ ಭರವಸೆ ನೀಡುವುದಕ್ಕೆ ಜನರು ಬಲಿ ಬೀಳಬಾರದೆಂಬ ಉದ್ದೇಶದಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಯತ್ನ ನನ್ನದು. ಸಾಮಾನ್ಯ, ವಿನೀತ ಜನರನ್ನು ಹಾಗೂ ಉತ್ತಮ ಅಭ್ಯರ್ಥಿಗಳನ್ನು ಅವರು ಆರಿಸಬೇಕು" ಎಂದು ಹೇಳುತ್ತಾರೆ. ಪತ್ರಕರ್ತರಾಗಿದ್ದ 33 ವರ್ಷದ ಸರವಣನ್ ರಾಜಕೀಯ ನೇತಾರರು ನೀಡುವ ದೊಡ್ಡ ದೊಡ್ಡ ಆಶ್ವಾಸನೆಗಳಿಗೆ ಬಲಿಬೀಳಬಾರದು ಎಂದು ಹೇಳುತ್ತಾರೆ.
ಅಂದ ಹಾಗೆ ಸರವಣನ್ ಅವರ ಆಶ್ವಾಸನೆಗಳ ಪಟ್ಟಿಯಲ್ಲಿ ಗೃಹಿಣಿಯರ ಕೆಲಸದ ಹೊರೆ ಕಡಿಮೆ ಮಾಡಲು ರೋಬಾಟುಗಳೂ ಇವೆ. ಅಷ್ಟೇ ಏಕೆ? ಪ್ರತಿಯೊಂದು ಕುಟುಂಬಕ್ಕೆ ಬೋಟು ಹಾಗೂ ಜಲ ಮಾರ್ಗಗಳು, ಕ್ಷೇತ್ರವನ್ನು ತಂಪಾಗಿರಿಸಲು 300 ಅಡಿ ಎತ್ತರದ ಕೃತಕ ಹಿಮ ಪರ್ವತ, ಬಾಹ್ಯಾಕಾಶ ಸಂಶೋಧನಾ ಕೇಂದ್ರ ಹಾಗೂ ರಾಕೆಟ್ ಉಡ್ಡಯಣ ಕೇಂದ್ರವನ್ನೂ ಅವರು ಭರವಸೆ ನೀಡಿದ್ದಾರೆ.
ತಮ್ಮ ಬಡ ಹೆತ್ತವರ ಜತೆ ವಾಸಿಸುವ ಸರವಣನ್ ಅವಿವಾಹಿತರಾಗಿದ್ದು ತಮ್ಮ ನಾಮಪತ್ರದ ಜತೆ ಇರಿಸಬೇಕಾದ ಠೇವಣಿಗಾಗಿ ಅವರು ರೂ 20,000 ಸಾಲ ಪಡೆದಿದ್ದಾರೆ.







