ಹಿರಿಯ ನಾಗರಿಕರಿಗೆ ಅಂಚೆ ಮತದಾನ ಸೌಲಭ್ಯ ಕೋರಿ ಪಿಐಎಲ್: ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಮಾ.25: ಚುನಾವಣೆಗಳಲ್ಲಿ ಹಿರಿಯ ನಾಗರಿಕರಿಗೆ ಅಂಚೆ ಮತ ಪತ್ರಗಳ ಮೂಲಕ ಅವರ ಮತ ಚಲಾಯಿಸಲು ಸೌಲಭ್ಯ ಒದಗಿಸುವಂತೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ತುಮಕೂರು ಮೂಲದ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಎಲ್ಲ ಹಿರಿಯ ನಾಗರಿಕರಿಗೆ ಅಂಚೆ ಮತದ ಮೂಲಕ ಅವರ ಮತ ಚಲಾಯಿಸಲು ಅವಕಾಶ ನೀಡುವಂತೆ ಆದೇಶ ಹೊರಡಿಸಲು ಸಾಧ್ಯವಿಲ್ಲ. ಹೀಗಾಗಿ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ, ಅರ್ಜಿ ಇತ್ಯರ್ಥಪಡಿಸಿ ಎಂದು ಆದೇಶಿಸಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಹಿರಿಯ ನಾಗರಿಕರು ತಮ್ಮ ಮತ ಚಲಾಯಿಸಲು ಮತಗಟ್ಟೆ ಮುಂದೆ ಬಹಳ ಹೊತ್ತು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಏರ್ಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಆದರೆ, ವಾಸ್ತವವಾಗಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಳು ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ದೀರ್ಘ ಕಾಲ ನಿಲ್ಲುವುದನ್ನು ತಡೆಯಲು ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿರುತ್ತದೆ. ಹಿರಿಯ ನಾಗರಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ಚುನಾವಣಾ ಆಯೋಗ ಬಹಳ ಸಂವೇದನಾಶೀಲವಾಗಿದ್ದು, ಹಿರಿಯ ನಾಗರಿಕರಿಗೆ ತೊಂದರೆ ಆಗದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಕೊರೋನ ಮತ್ತಷ್ಟು ಹೆಚ್ಚಳವಾಗುತ್ತಿದ್ದು, ಇದರ ನಡುವೆಯೇ ಚುನಾವಣೆಗಳು ನಡೆಯುತ್ತಿವೆ. ಹೀಗಾಗಿ, ನಾಗರಿಕರಿಗೆ ಪ್ರತ್ಯೇಕ ಮತದಾನ ಕೇಂದ್ರ ಒದಗಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.







