ನಾನು ತಪ್ಪು ಮಾಡಿಲ್ಲ, 10 ಸಿಡಿ ಬಂದರೂ ಹೆದರುವ ಪ್ರಶ್ನೆಯೇ ಇಲ್ಲ: ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾ.25: ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಈ ರೀತಿಯ ಹತ್ತು ಸಿಡಿ ಬಿಡುಗಡೆ ಮಾಡಿದರೂ, ಹೆದರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಗುರುವಾರ ಯುವತಿಯ ಎರಡನೆ ವಿಡಿಯೊ ಬಿಡುಗಡೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿರ್ದೋಷಿ ಆಗಿ ಬರುತ್ತೇನೆ. ಅಲ್ಲದೆ, ಷಡ್ಯಂತ್ರ ರೂಪಿಸಿದವರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ. ಶೀಘ್ರದಲ್ಲಿಯೇ ಆ ಮಹಾನಾಯಕನ ಹೆಸರನ್ನು ಬಹಿರಂಗಗೊಳಿಸುತ್ತೇನೆ ಎಂದು ನುಡಿದರು.
ಈ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ಇದ್ದು, ನಾನು ಲಿಖಿತ ದೂರು ಸಲ್ಲಿಸಿದ ಕ್ಷಣ ಮಾತ್ರದಲ್ಲಿಯೇ ಸಿಡಿ ಬರುತ್ತದೆ. ನನ್ನ ತೇಜೋವಧೆ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದ ಅವರು, ಯುವತಿ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆಂಬುದು ಗೊತ್ತಾಗಲಿ. ನಾವು ದಾಖಲೆ, ಸಾಕ್ಷ್ಯ ಕಲೆ ಹಾಕಿದ್ದೇವೆ. ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸದೆ ಬಿಡುವುದಿಲ್ಲ ಎಂದು ಹೇಳಿದರು.
ಪದೇ ಪದೇ ಆರೋಪ ಮಾಡುತ್ತಿರುವ ಯುವತಿ ಎದುರು ಬಂದು ಹೇಳಲಿ. ಅಲ್ಲದೆ, ಇಷ್ಟೊಂದು ದಿನ ಆದರೂ, ಏಕೆ ಆಕೆ ಹೊರಬಂದು ಮಾತಾಡಿಲ್ಲ. ಇದೀಗ ಕಾಂಗ್ರೆಸ್ ನಾಯಕರ ಸಹಕಾರ ಕೇಳುತ್ತಿದ್ದು, ಇದನ್ನ ನೀವೇ ಅರ್ಥ ಮಾಡಿಕೊಳ್ಳಿ. ಆ ಮಹಾನಾಯಕರ ಸಿಡಿ ಬಾಂಬ್ ನನ್ನ ಜೇಬಿನಲ್ಲಿದೆ, ಬಿಟ್ಟರೆ ನೀವು ಶಾಕ್ ಆಗುತ್ತೀರಿ. ಸಿಡಿಯಲ್ಲಿನ ಯುವತಿಯ ಧ್ವನಿ, ಈಗ ಮಾತನಾಡುತ್ತಿರುವ ಯುವತಿಯ ಧ್ವನಿ ಬದಲಾವಣೆ ಆಗಿದೆ ಎಂದು ಜಾರಕಿಹೊಳಿ ತಿಳಿಸಿದರು.
ಸದನದಲ್ಲಿ ಸಿಡಿ ವಿಷಯ ಪ್ರಸ್ತಾವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಕುರಿತು ನನಗೆ ಅಪಾರ ಗೌರವ ಇದೆ. ಆದರೆ, ಅವರ ಸುಖಾಸುಮ್ಮನೆ ಅತ್ಯಾಚಾರ ಪ್ರಕರಣ ದಾಖಲಿಸಿ ಎನ್ನುತ್ತಾರೆ. ಅದನ್ನ ಕೇಳಿ ನನಗೆ ಅಚ್ಚರಿ ಆಯಿತು ಎಂದರು.







