ಸಮುದಾಯಗಳ ನಡುವೆ ಘರ್ಷಣೆ ಕುರಿತು ಫೇಸ್‌ಬುಕ್ ಪೋಸ್ಟ್: ಪತ್ರಕರ್ತೆಯ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ

ಹೊಸದಿಲ್ಲಿ, ಮಾ.25: ಮೇಘಾಲಯದ ಲಾಸೋಟನ್ ಗ್ರಾಮದಲ್ಲಿ ಆದಿವಾಸಿಗಳೆನ್ನಲಾದ ಮುಸುಕುಧಾರಿ ವ್ಯಕ್ತಿಗಳ ಗುಂಪೊಂದು ಐವರು ಆದಿವಾಸಿಯೇತರ ಯುವಕರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಫೇಸ್‌ಬುಕ್ ಪೋಸ್ಟ್‌ಗಾಗಿ ಶಿಲ್ಲಾಂಗ್ ಟೈಮ್ಸ್‌ನ ಸಂಪಾದಕಿ ಪ್ಯಾಟ್ರಿಷಿಯಾ ಮುಖಿಮ್ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ರದ್ದುಗೊಳಿಸಿದೆ.
ತನ್ನ ವಿರುದ್ಧದ ಕ್ರಿಮಿನಲ್ ಕಾನೂನು ಕ್ರಮಗಳನ್ನು ರದ್ದುಗೊಳಿಸಲು ನಿರಾಕರಿಸಿದ್ದ ಮೇಘಾಲಯ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ಯಾಟ್ರಿಷಿಯಾ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.
ಫೆಬ್ರವರಿಯಲ್ಲಿ ನಡೆದಿದ್ದ ಹಿಂದಿನ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಕಳೆದ ವರ್ಷದ ಜು.3ರಂದು ಲಾಸೋಟನ್ ಗ್ರಾಮದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ಐವರು ಯುವಕರ ಮೇಲೆ ಹಲ್ಲೆ ನಡೆಸಿತ್ತು. ಘಟನೆಯ ಬಳಿಕ ಪ್ಯಾಟ್ರಿಷಿಯಾ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಲ್ಲೆಕೋರರನ್ನು ಗುರುತಿಸುವಲ್ಲಿ ಗ್ರಾಮ ಮಂಡಳಿಯ ವೈಫಲ್ಯವನ್ನು ಟೀಕಿಸಿದ್ದರು. ಆದಿವಾಸಿಯೇತರರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ ಮತ್ತು 1979ರಿಂದ ಇಂತಹ ಒಬ್ಬನೇ ಒಬ್ಬ ದಾಳಿಕೋರನನ್ನು ಬಂಧಿಸಲಾಗಿಲ್ಲ,ಹೀಗಾಗಿ ಮೇಘಾಲಯವು ವಿಫಲ ರಾಜ್ಯವಾಗಿದೆ ಎಂದು ಅವರು ಬರೆದಿದ್ದರು.
ಜು.7ರಂದು ಪ್ಯಾಟ್ರಿಷಿಯಾ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ಗ್ರಾಮ ಮಂಡಳಿಯು ಅವರ ವಿರುದ್ಧ ಪೊಲೀಸ್ ದೂರನ್ನು ಸಲ್ಲಿಸಿತ್ತು. ಇದರ ಆಧಾರದಲ್ಲಿ ಪೊಲೀಸರು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿರುವುದಕ್ಕಾಗಿ ಐಪಿಸಿಯ ವಿವಿಧ ಕಲಮ್‌ಗಳಡಿ ಪ್ಯಾಟ್ರಿಷಿಯಾ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ತನಿಕಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸನ್ನೂ ಜಾರಿಗೊಳಿಸಲಾಗಿತ್ತು.
ಸತ್ಯವನ್ನು ನುಡಿದಿದ್ದಕ್ಕಾಗಿ ಮತ್ತು ದ್ವೇಷಾಪರಾಧದ ರೂವಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕೋರಿದ್ದಕ್ಕಾಗಿ ತಾನು ಕಿರುಕುಳವನ್ನು ಎದುರಿಸುತ್ತಿದ್ದೇನೆ ಎಂದು ಪ್ಯಾಟ್ರಿಷಿಯಾ ತನ್ನ ಮೇಲ್ಮನವಿಯಲ್ಲಿ ತಿಳಿಸಿದ್ದರು.







