ಸಿಡಿ ಪ್ರಕರಣ: ಯುವತಿ- ಪೋಷಕರಿಗೆ ಪೊಲೀಸ್ ರಕ್ಷಣೆ; ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಮಾ.25: ಸಿಡಿ ಪ್ರಕರಣದಲ್ಲಿ ಸಿಟ್ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು, ಯುವತಿ ಮತ್ತು ಆಕೆಯ ಪೋಷಕರಿಗೆ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಅಲ್ಲದೆ, ಯಾವುದೇ ಒಂದು ಪ್ರಕರಣದ ತನಿಖೆ ಆಗುವಾಗ ಹಲವಾರು ಬೆಳವಣಿಗೆಗಳು, ಹಲವಾರು ತಿರುವುಗಳು ಪಡೆಯುತ್ತವೆ. ಅವೆಲ್ಲದಕ್ಕೂ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದರು.
ಯುವತಿಗೆ ರಕ್ಷಣೆ ಕೊಡಲು ನಾವು ಸಿದ್ಧರಿದ್ದೇವೆ. ಅವರು ಎಲ್ಲಿದ್ದಾರೆ ಎಂದು ಹೇಳಿದರೆ ಅಲ್ಲಿಯೇ ರಕ್ಷಣೆ ಒದಗಿಸುತ್ತೇವೆ. ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುತ್ತದೆ. ಪೊಲೀಸ್ ರಕ್ಷಣೆಯಲ್ಲಿ ಅವರು ಹೇಳಿಕೆ ಕೊಡಬಹುದು ಅಥವಾ ಇಲ್ಲಿಗೆ ಬಂದು ಹೇಳಿಕೆ ದಾಖಲಿಸಬಹುದು ಎಂದು ಅವರು ಹೇಳಿದರು.
ಯಾರ ಪರವಾಗಿಯೂ ನಮ್ಮ ತನಿಖೆ ಇಲ್ಲ, ಯಾರ ವಿರುದ್ಧವೂ ನಮ್ಮ ತನಿಖೆ ಇಲ್ಲ. ಸತ್ಯ ಹೊರಗೆ ಬರಬೇಕು ಎನ್ನುವ ದೃಷ್ಟಿಯಿಂದ ತನಿಖೆ ಮಾಡುತ್ತಿದ್ದೇವೆ. ತನಿಖೆ ಮಾಡುವಂತಹ ಸಂದರ್ಭದಲ್ಲಿ ಹಲವಾರು ತಿರುವುಗಳು ಬರಲಿವೆ. ಅವನ್ನೆಲ್ಲಾ ನಾವು ಸಕಾರಾತ್ಮಕವಾಗಿ ತೆಗೆದುಕೊಂಡು ಯಾರ ವಿರುದ್ಧವೂ ತೆಗೆದುಕೊಳ್ಳದೆ ನಿಷ್ಪಕ್ಷಪಾತವಾಗಿ, ನಿಷ್ಠುರವಾಗಿ ನಮ್ಮ ವಿಶೇಷ ತನಿಖಾ ತಂಡ ತನಿಖೆ ಮಾಡುತ್ತದೆ ಎಂದು ಬೊಮ್ಮಾಯಿ ನುಡಿದರು.
ಸಿಟ್ ಸ್ಪಷ್ಟನೆ
ಯುವತಿಯಿಂದ ನಮಗೆ ಯಾವುದೇ ವಿಡಿಯೋ ಬಂದಿಲ್ಲ. ಆಕೆಗೆ 5 ಬಾರಿ ನೋಟಿಸ್ ಕೊಟ್ಟಿದ್ದೇವೆ, ಆದರೆ ಯಾವುದೇ ಉತ್ತರ ನೀಡಿಲ್ಲ. ಯುವತಿ ವಿಡಿಯೋದಲ್ಲಿ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಆಕೆ ಹೇಳಿರುವ ಸಮಯದಲ್ಲಿ ಸಿಟ್ ರಚನೆಯೇ ಆಗಿರಲಿಲ್ಲ.
-ಸೌಮೇಂದು ಮುಖರ್ಜಿ, ಸಿಟ್ ಮುಖ್ಯಸ್ಥ
ಯುವತಿಗೆ ರಕ್ಷಣೆ
ಸಿಡಿ ಪ್ರಕರಣದ ಯುವತಿ ಹೊಸ ವಿಡಿಯೊದಲ್ಲಿ ಏನು ಹೇಳಿದ್ದಾರೆಂದು ನೋಡಿಲ್ಲ. ಆದರೆ, ನಮ್ಮ ಸರಕಾರ ಆ ಯುವತಿಗೆ ರಕ್ಷಣೆ ನೀಡುವುದಾಗಿ ಸದನದಲ್ಲೇ ಹೇಳಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಕೆಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮಿಂದ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ.
-ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ







