ಪತಿಯ ಕೊಲೆ ಪ್ರಕರಣ: ಮಹಿಳೆ ಸೇರಿ 9 ಆರೋಪಿಗಳ ಬಂಧನ

ಬೆಂಗಳೂರು, ಮಾ.25: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೆ ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಮಹಿಳೆ ಸೇರಿ ಹಲವರನ್ನು ಇಲ್ಲಿನ ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಲಕ್ ನಗರದ ಅಫ್ಸರ್ ಖಾನ್ (41), ಈತನ ಪ್ರಿಯತಮೆ ತಸ್ಲಿಮಾ ಭಾನು(29) ಸೇರಿದಂತೆ ಒಟ್ಟು ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ಮಾ.19ರಂದು ಸಂಜೆ 6:30ರ ಸುಮಾರಿನಲ್ಲಿ ನ್ಯೂ ಗುರಪ್ಪನಪಾಳ್ಯ ಟಿಂಬರ್ ನಲ್ಲಿ, 4ನೆ ಮುಖ್ಯರಸ್ತೆ, ಸರಕಾರ್ ಗ್ಲಾಸ್ ಮತ್ತು ಪ್ಲೇವುಡ್ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮುಹಮ್ಮದ್ ಶಫಿ ಎಂಬವರನ್ನು ಮಾರಕಾಸ್ತ್ರಗಳಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಗಂಭೀರ ಪ್ರಕರಣ ಸಂಬಂಧ ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗಡೆ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ನಟರಾಜ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದಾಗ ಮೃತರ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆಗೆ ಸುಪಾರಿ ಕೊಟ್ಟಿರುವ ಮಾಹಿತಿ ಬೆಳಕಿಗೆ ಬಂದಿದೆ.
ಆರೋಪಿ ಅಫ್ಸರ್ ಖಾನ್‍ಗೆ ಎರಡು ವರ್ಷಗಳ ಹಿಂದೆ ಸಂಬಂಧಿಕರ ಮದುವೆಯಲ್ಲಿ ಆರೋಪಿತೆ ತಸ್ಲಿಮಾ ಭಾನು ಪರಿಚಯವಾಗಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅಕ್ರಮ ಸಂಬಂಧಕ್ಕಾಗಿ ತಸ್ಲಿಮಾ ಭಾನು ಅವರ ಪತಿ ಮುಹಮ್ಮದ್ ಶಫಿಯನ್ನು ಹತ್ಯೆ ಮಾಡಲು ಅಫ್ಸರ್ ಖಾನ್ ಸಂಚು ರೂಪಿಸುತ್ತಾನೆ. ಅದರಂತೆ ಈತನ ಸಂಬಂಧಿ, ಕ್ರಿಮಿನಲ್ ಹಿನ್ನೆಲೆಯಿರುವ ತಬ್ರೇಝ್ ಹಾಗೂ ವಸೀಮ್ ಎಂಬಾತನಿಗೆ ಸುಪಾರಿ ನೀಡಿದ್ದಾನೆ. ಬಳಿಕ ದುಷ್ಕರ್ಮಿಗಳು ವ್ಯವಸ್ಥಿತವಾಗಿ ಆತನನ್ನು ಕೊಲೆಗೈದಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ ಎಂದು ಡಿಸಿಪಿ ವಿವರಿಸಿದರು.







