ಆಟೊದಲ್ಲಿ ಮಾದಕ ವಸ್ತು ಸಾಗಾಟ ಆರೋಪ: ಇಬ್ಬರ ಬಂಧನ, 45 ಕೆಜಿ ಗಾಂಜಾ ಜಪ್ತಿ

ಬೆಂಗಳೂರು, ಮಾ.25: ಆಟೊದಲ್ಲಿ ಮಾದಕವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಉತ್ತರ ವಿಭಾಗದ ಪೊಲೀಸರು 45.1 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶ್ರೀರಾಮಪುರದ ಸತೀಶ್(28), ವಸಂತ(24) ಬಂಧಿತ ಆರೋಪಿಗಳಾಗಿದ್ದಾರೆಂದು ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ.
ಮಾ.21ರಂದು ಶ್ರೀರಾಮಪುರ ಪೊಲೀಸ್ ಇನ್‍ಸ್ಪೆಕ್ಟರ್ ಬಾಲಕೃಷ್ಣ ಮತ್ತವರ ಸಿಬ್ಬಂದಿ ಗಸ್ತಿನಲ್ಲಿರುವಾಗ ವಾಟಾಳ್ ನಾಗರಾಜ್ ರಸ್ತೆಯ ಮಾರ್ಗವಾಗಿ ಆರೋಪಿಗಳು ಆಟೊದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನು ಆಧರಿಸಿ ಬಂಧಿಸಲಾಗಿದೆ.
ಆರೋಪಿಗಳ ಪೈಕಿ ಸತೀಶ್ ಸ್ವಂತ ಆಟೊ ಇಟ್ಟುಕೊಂಡು ಚಾಲಕನಾಗಿದ್ದು, ಈತನ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಗಾಂಜಾ ಪ್ರಕರಣ, ಸುಲಿಗೆ ಸೇರಿದಂತೆ ಇನ್ನಿತರೆ ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ಈತ ಆಂಧ್ರಪ್ರದೇಶ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ಮುಂಚಿತವಾಗಿ ಹಣವನ್ನು ನೀಡಿದ್ದ. ಬಳಿಕ ಆತ ರೈಲಿನ ಮೂಲಕವೇ ಬೆಂಗಳೂರಿಗೆ ಗಾಂಜಾವನ್ನು ರಫ್ತು ಮಾಡಿದ್ದ. ಇದನ್ನು ಆರೋಪಿಗಳಿಬ್ಬರು ಆಟೊದಲ್ಲಿ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದಿದ್ದಾರೆ ಎಂದು ಧರ್ಮೇಂದ್ರಕುಮಾರ್ ಮೀನಾ ವಿವರಿಸಿದರು.







