ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಹೇರುವ ಪ್ರಶ್ನೆಯೇ ಇಲ್ಲ : ಡಿಸಿ ಜಗದೀಶ್
ಮಾಸ್ಕ್ ಇಲ್ಲದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ತರಾಟೆ, ದಂಡ

ಕುಂದಾಪುರ, ಮಾ. 25: ಕುಂದಾಪುರ ಪೇಟೆಯಲ್ಲಿ ಗುರುವಾರ ಬೆಳಗ್ಗೆ ಕೋವಿಡ್ ಮಾರ್ಗಸೂಚಿಗಳನ್ನು, ಜಿಲ್ಲಾಡಳಿತದ ಆದೇಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೋವಿಡ್ ವಿರುದ್ಧ ಕಡ್ಡಾಯವಾಗಿ ಧರಿಸಬೇಕಿದ್ದ ಮಾಸ್ಕ್ ಧರಿಸದೇ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳದೇ ಓಡಾಡುತಿದ್ದ ಸಾರ್ವಜನಿಕರು, ವಿದ್ಯಾರ್ಥಿಗಳು, ಆಟೋ ಚಾಲಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಎಚ್ಚರಿಕೆಯನ್ನು ನೀಡಿದರಲ್ಲದೇ ಹಲವರಿಗೆ ಕೊರೋನ ಕ್ಲಾಸ್‌ಗಳನ್ನು ತೆಗೆದುಕೊಂಡರು.
ಇವರೆಲ್ಲರ ವಿರುದ್ಧ ಜಿಲ್ಲಾದಿಕಾರಿಗಳ ಆದೇಶದಂತೆ ಕುಂದಾಪುರ ಪುರಸಭೆ ವತಿಯಿಂದ ದಂಡವನ್ನು ವಿಧಿಸಲಾಯಿತು. ಇದೇ ವೇಳೆ ಆಸುಪಾಸಿನ ಕೆಲವೊಂದು ಅಂಗಡಿಗಳಿಗೆ ದಾಳಿ ಮಾಡಿ ಕೊರೋನ ನಿಯಮ ಉಲ್ಲಂಘನೆ ಮಾಡಿದ ಅಂಗಡಿ ಮಾಲಕರನ್ನು ಹಾಗೂ ನೌಕರರನ್ನು ಸಹ ತರಾಟೆಗೆ ತೆಗೆದುಕೊಂಡು ಅವರಿಗೆ ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಿದರು.
ಲಾಕ್‌ಡೌನ್ ಪ್ರಶ್ನೆಯೇ ಇಲ್ಲ: ಇದೇ ವೇಳೆ ಕುಂದಾಪುರದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಯಲ್ಲಿ ಕೊರೋನ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಮಣಿಪಾಲದ ಎಂಐಟಿ, ಕುರ್ಕಾಲು ಪಾಜಕದ ಆನಂದತೀರ್ಥ ವಸತಿ ಶಾಲೆ ಹಾಗೂ ಕಾರ್ಕಳದಲ್ಲಿ ಹಲವು ಪ್ರಕರಣಗಳು ಕಂಡು ಕಂಡುಬಂದಿವೆ. ಇದಕ್ಕಾಗಿ ಸರಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.
ವಿದ್ಯಾಸಂಸ್ಥೆಗಳು ಸಾಧ್ಯವಾದಷ್ಟು ಆನ್‌ಲೈನ್ ಕ್ಲಾಸ್ ಮಾಡಬೇಕು. ಇದರಿಂದ ಕೊರೋನ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯಬಹುದು. ಅದಕ್ಕಾಗಿ ಶಿಕ್ಷಣ ಸಚಿವರಿಗೂ ಹಾಗೂ ಸರಕಾರಕ್ಕೂ ಮನವಿ ಮಾಡಿದ್ದೇನೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಉಡುಪಿ ಜಿಲ್ಲೆಯನ್ನು ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಪ್ರತಿದಿನ 400 ಕೊರೋನ ಪ್ರಕರಣ ಬಂದರೂ ಅದನ್ನು ನಿಭಾಯಿಸುವ ವೈದ್ಯಕೀಯ ಸಾಮರ್ಥ್ಯ ನಮ್ಮ ಜಿಲ್ಲೆ ಹೊಂದಿದೆ ಎಂದವರು ವಿಶ್ವಾಸದಿಂದ ನುಡಿದರು.
ಯಾವುದೇ ಕಾರಣಕ್ಕೂ ಒಬ್ಬರಿಂದ ಇನ್ನೊಬ್ಬರಿಗೆ ಕೊರೋನ ಹರಡಬಾರದು ಎನ್ನುವ ಉದ್ದೇಶ ನಮ್ಮದಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡದೆ ಮಾಸ್ಕ್ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಾವಜನಿಕರಲ್ಲಿ ಮನವಿ ಮಾಡಿದರು.









