ಅಪೌಷ್ಠಿಕ ದಿಂದ ಪೌಷ್ಠಿಕದ ಕಡೆಗೆ ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಕುಂದಾಪುರ : ಕುಂದಾಪುರ ತಾಲೂಕು ಆರೋಗ್ಯ ಆಧಿಕಾರಿ ಕಚೇರಿ, ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಂದಾಪುರ ತೋಟಗಾರಿಕೆ ಇಲಾಖೆ, ಕುಂದಾಪುರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಕುಂದಾಪುರ, ಬೈಂದೂರು ತಾಲೂಕು ಎನ್.ಆರ್.ಸಿ. ಫಲಾನುಭವಿಗಳಿಗೆ ಗುರುವಾರ ಬೆಳಿಗ್ಗೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಹಾಲ್ನಲ್ಲಿ ಸಭೆ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜನರನ್ನು ಅಪೌಷ್ಠಿಕದಿಂದ ಪೌಷ್ಠಿಕದ ಕಡೆಗೆ ಒಯ್ಯುವ ಸರಕಾರದ ಮಹತ್ವದ ಯೋಜನೆ ಇದಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಜಾಸ್ತಿ ಇದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳು ಕಡಿಮೆ. ಏಕೆಂದರೆ ಉಡುಪಿ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದರು.
ಗರ್ಭಿಣಿ ಮಹಿಳೆಯರು ಹೆಚ್ಚಿನ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಮಕ್ಕಳು ಸರಿಯಾದ ಬೆಳವಣಿಗೆ ಆಗಬೇಕಾದರೆ ಪೌಷ್ಠಿಕ ಆಹಾರ ಅತ್ಯಗತ್ಯ. ಇಲ್ಲವಾದರೆ ಮುಂದೆ ನಿಮ್ಮ ಮಕ್ಕಳು ನಿಮ್ಮನ್ನು ಸಹ ಕ್ಷಮಿಸುವುದಿಲ್ಲ, ಅಷ್ಟೇ ಅಲ್ಲ ಸಮಾಜ ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ನುಡಿದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಉಪವಿಭಾಗಾಧಿಕಾರಿ ಕೆ. ರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎನ್‌ಆರ್‌ಸಿ ಫಲಾನುಭವಿಗಳಿಗೆ ನಗರದ ಉದ್ಯಮಿಗಳಿಂದ ನೀಡಲ್ಪಟ್ಟ ವಿವಿಧ ಉಡುಗೊರೆ, ವಸ್ತುಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಪಂ ಅಧ್ಯಕ್ಷೆ ಎಚ್. ಇಂದಿರಾ ಶೆಟ್ಟಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಕುಂದಾಪುರ ರೆಡ್ಕ್ರಾಸ್ ಸೊಸೈಟಿ ಚೇರ್ಮೆನ್ ಜಯಕರ್ ಶೆಟ್ಟಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾರಾಯಣ ಶೆಟ್ಟಿ, ಉಡುಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್.ಶೇಶಪ್ಪ, ಕುಂದಾಪುರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಉಪಸ್ಥಿತರಿದ್ದರು.








