ಮಂಗಳೂರು : ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ !

ಮಂಗಳೂರು, ಮಾ.25: ಅತ್ತಾವರದ ಮೀನು ಮಾರಾಟ ಮಳಿಗೆಯಲ್ಲಿ ದೊಡ್ಡ ಗಾತ್ರದ ಮೀನಿನ ಹೊಟ್ಟೆಯಲ್ಲಿ ಪೇಪರ್‌ನಿಂದ ಕೂಡಿದ ಪ್ಲಾಸ್ಟಿಕ್ ಪತ್ತೆಯಾಗಿರುವುದು ಸಮುದ್ರ, ನದಿ, ಕೆರೆಗಳು ಮಲಿನಗೊಂಡು ಪ್ಲಾಸ್ಟಿಕ್‌ನಿಂದ ತುಂಬಿರುವುದಕ್ಕೆ, ಜಲಚರಗಳು ಅಪಾಯದಲ್ಲಿರುವುದಕ್ಕೆ ಸಾಕ್ಷಿಯಾಗಿದೆ.
ಅತ್ತಾವರದ ಫ್ರೆಸ್ ಸೊ ಫ್ರೆಸ್ ಎಂಬ ಮಳಿಗೆಯ ಸಿಬ್ಬಂದಿ ಮುರು ಮೀನು (ರೀಫ್ ಕಾಡ್ ಫಿಶ್) ಕತ್ತರಿಸಿ ಶುಚಿಗೊಳಿಸುತ್ತಿದ್ದ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಇದನ್ನು ಕಂಡು ಸಿಬ್ಬಂದಿ ಹಾಗೂ ಮಳಿಗೆಯ ಮಾಲಕ ಗಾಬರಿಯಾಗಿದ್ದಾರೆ. ಜನರಿಗೆ ಜಾಗೃತಿ ನೀಡುವ ಸಲುವಾಗಿ ಮಳಿಗೆಯ ಮಾಲಕ ಸಾಮಾಜಿಕ ಜಾಲತಾಣದ ಮೂಲಕ ಇದರ ವೀಡಿಯೋವನ್ನು ಹರಿಯಬಿಟ್ಟಿದ್ದಾರೆ.
ಇಂತಹ ಪ್ರಕರಣವನ್ನು ತಾವು ಪ್ರಥಮ ಬಾರಿಗೆ ಕಂಡಿದ್ದು, ಈ ರೀತಿಯಾಗಿ ಜನರು ಪ್ಲಾಸ್ಟಿಕ್‌ಗಳನ್ನು ಸಮುದ್ರ, ನದಿ ಕೆರೆಗಳಿಗೆ ಎಸೆದಲ್ಲಿ ಮೀನಿನ ಸಂತತಿ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
‘‘ನಾನು ಆ ವೀಡಿಯೋವನ್ನು ನೋಡಿದ್ದೇನೆ. ಇದು ಸಮುದ್ರದ ತಳಭಾಗ ಪ್ಲಾಸ್ಟಿಕ್‌ನಿಂದ ತುಂಬಿ ಜಲಚರಗಳು ಅಪಾಯವಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಮೀನುಗಳು ಪ್ಲಾಸ್ಟಿಕ್ ತಿನ್ನಲಾರವು. ಆದರೆ ಮೀನುಗಳನ್ನು ಹಿಡಿಯುವ ಸಂದರ್ಭ ತಳಭಾಗದ ಪ್ಲಾಸ್ಟಿಕ್‌ಗಳು ಕೂಡಾ ಮೀನಿನ ಜತೆ ಬಲೆಯನ್ನು ಸೇರುತ್ತವೆ. ಆ ಸಂದರ್ಭದಲ್ಲಿ ಮೀನುಗಳು ಉಸಿರಾಟದ ಪ್ರಕ್ರಿಯೆ ವೇಳೆ ಈ ಪ್ಲಾಸ್ಟಿಕನ್ನು ನುಂಗಿರುವ ಸಾಧ್ಯತೆ ಇದೆ. (ನೀರಿನಲ್ಲಿ ಬಿದ್ದು ಮುಳುಗುವಾಗ ಮನುಷ್ಯರ ಹೊಟ್ಟೆಯೊಳಗೆ ನೀರು ಸೇರುತ್ತದೆ. ಅದೇ ರೀತಿ ಮೀನಿನ ಹೊಟ್ಟೆಗೆ ನೀರಿನ ಜತೆ ಪ್ಲಾಸ್ಟಿಕ್ ಸೇರಿರಬಹುದು) ಅದು ಪ್ಲಾಸ್ಟಿಕ್ ಕೂಡಾ ತಾಜಾ ಆಗಿರುವುದರಿಂದ ಇದು ಸಾಯುವ ಕೆಲ ಸಮಯದ ಹಿಂದೆ ನುಂಗಿರುವಂತಿದೆ. ನಿಜಕ್ಕೂ ಇದು ಗಂಭೀರ ವಿಚಾರ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಹಾಗೂ ಪ್ರೊ. ಡಾ. ಎ. ಸೆಂತಿಲ್ ವೇಲ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.
‘‘ನಾನು ಕಳೆದ ಎರಡು ವರ್ಷಗಳಿಂದ ಸಮುದ್ರದಲ್ಲಿ ಮೀನುಗಳು ಅಪಾಯದಲ್ಲಿರುವ ಬಗ್ಗೆ ಆಡಳಿತದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ಪ್ಲಾಸ್ಟಿಕ್‌ಗಳು ನೀರಿನಲ್ಲಿ ಸೇರಿ ಡೈಲ್ಯೂಟ್ ಆಗಿ ಸೂಕ್ಷ್ಮ ಕಣಗಳಾಗಿ ಪರಿವರ್ತನೆಯಾಗಿ ನೀರಿನೊಂದಿಗೆ ಬೆರೆತು ಚಿಕ್ಕಚಿಕ್ಕ ಮೀನು ಮರಿಗಳು ಅದನ್ನು ತಿಂದು ಸಾಯುತ್ತವೆ. ಮಾತ್ರವಲ್ಲದೆ ಮೀನುಗಾರಿಕೆ ಸಂದರ್ಭ ಟ್ರಾಲ್ ಬೋಟ್‌ಗಳ ಬಲೆಗಳು ಸಮುದ್ರದ ತಳಭಾಗವನ್ನು ತಲುಪುವಾಗ ಶೇ. 40ರಷ್ಟು ಪ್ಲಾಸ್ಟಿಕ್‌ಗಳು ಕೂಡಾ ಮೀನಿನ ಜತೆ ಬಲೆ ಸೇರುತ್ತವೆ ಎಂಬ ಬಗ್ಗೆ ಮೀನುಗಾರರು ದೂರು ನೀಡುತ್ತಾರೆ. ಈ ರೀತಿ ಬಲೆಯನ್ನು ಮೇಲೆತ್ತುವಾಗ ಮೀನುಗಳು ಗಾಬರಿಯಲ್ಲಿ ನೀರಿನ ಜತೆ ಪ್ಲಾಸ್ಟಿಕ್ ನುಂಗುವ ಸಾಧ್ಯತೆ ಇದೆ. ಇದರಿಂದಾಗಿ ನಮ್ಮ ಸಮುದ್ರದಲ್ಲಿ ಬೂತಾಯಿ ಮೀನಿನ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತಿದೆ. ಇದು ಅಪಾಯದ ಮುನ್ಸೂಚನೆ. ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಪ್ಲಾಸ್ಟಿಕ್‌ನಿಂದ ಜಲಚರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್‌ಗಳು ಮಾತ್ರವಲ್ಲದೆ, ಥರ್ಮಾಕೋಲ್ ಸಮುದ್ರದ ಒಡಲು ಸೇರಿದೆ. ಮೀನುಗಾರರ ತುಂಡಾದ ಬಲೆಗಳು ಕೂಡಾ ಸಮುದ್ರ ಪಾಲಾಗುತ್ತಿವೆ. ಇದನ್ನು ಸ್ವಚ್ಛಗೊಳಿಸಲು ಯುದ್ಧೋಪಾದಿಯಲ್ಲಿ ಆಡಳಿತದಿಂದ ಕೆಲಸ ಆಗಬೇಕಾಗಿದೆ.’’
- ಡಾ. ಸೆಂತಿಲ್‌ವೇಲ್, ಡೀನ್, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ







