‘ಪೌಷ್ಟಿಕಾಂಶ ಕುರಿತು ಗರ್ಭಿಣಿಯರಿಗೆ ಅರಿವು ಅಗತ್ಯ’

ಮಂಗಳೂರು, ಮಾ.25: ಪೌಷ್ಟಿಕಾಂಶದ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ಗರ್ಭಿಣಿಯರು ಅರಿತುಕೊಳ್ಳಬೇಕು. ಪೋಷಕಾಂಶ ಭರಿತ ಆಹಾರ ಸೇವಿಸುವುದರ ಮೂಲಕ ಸಮಸ್ಯೆಯನ್ನು ತಡೆಯಬಹುದು ಎಂದು ಜಿಲ್ಲಾ ಸರಕಾರಿ ಲೇಡಿ ಘೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಸಲಹೆ ನೀಡಿದ್ದಾರೆ.
ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪೋಷಣ್ ಪಕ್ವಾಡ-2021ರ ಪೋಷಣ್ ಅಭಿಯಾನದ ಪಂಚಸೂತ್ರಗಳ ಕುರಿತ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಹಾಗೂ ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಕಂಡುಬರುವ ರಕ್ತಹೀನತೆ ಹೋಗಲಾಡಿಸಿ ತಾಯಂದಿರ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಮಗುವಿನ ಜನನದ ಮೊದಲೇ ಪ್ರಾಣ ಹೋಗಿರುತ್ತದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ತಾಯಿಯ ಅಪೌಷ್ಟಿಕತೆ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವಿಲ್ಲದಿರುವುದಾಗಿದೆ. ಪೌಷ್ಟಿಕಾಂಶವುಳ್ಳ ಆಹಾರದ ಸೇವನೆಯನ್ನು ಪ್ರತೀ ತಾಯಿಯು ಗರ್ಭಾವಸ್ಥೆಯಲ್ಲಿ ಮಾಡುವು ದರಿಂದ ಮಗುವಿಗೆ ಉತ್ತಮ ಆರೋಗ್ಯ ದೊರೆಯುವುದರೊಂದಿಗೆ ಮಗುವಿನ ಪ್ರಾಣ ಉಳಿಸಬಹುದು ಎಂದರು.
ಗರ್ಭಿಣಿಯರಿಗೆ 3 ತಿಂಗಳ ಮೊದಲೇ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡುವಂತೆ ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಿದರು. ಇದರಿಂದ ಒಂದು ಮಗುವಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಅಪೌಷ್ಟಿಕತೆಯಿಂದಾಗಿ ನವಮಾಸ ಗರ್ಭದಲ್ಲೇ ಇದ್ದು ಹುಟ್ಟಬೇಕಾದ ಮಗು ಇತ್ತೀಚಿನ ದಿನಗಳಲ್ಲಿ ನವಮಾಸಕ್ಕಿಂತ ಮೊದಲೇ ಹುಟ್ಟುವ ಸಂಖ್ಯೆ ಅಧಿಕವಾಗುತ್ತಿದೆ. ಅಲ್ಲದೇ ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸುವ ಮಕ್ಕಳು ಗಂಭೀರ ಸಮಸ್ಯೆಗಳನ್ನು ಎದುರಿಸುವ ಮೂಲಕ ಅಸುನೀಗುವರು ಎಂದರು.
ಭ್ರೂಣಾವಸ್ಥೆಯಲ್ಲಿರುವ ಮಗುವಿನ ಬೆಳವಣಿಗೆ ಸರಿಯಾದ ರೀತಿಯಲ್ಲಿ ಆಗದಿದ್ದರೆ ತಾಯಿಯ ಥೈರಾಯಿಡ್ ಹಾರ್ಮೋನಿನ ಕೊರತೆ ಕೂಡ ಕಾರಣವಾಗಿದೆ. ಈ ಸಮಸ್ಯೆ ಕುರಿತಂತೆ ವೈಜ್ಞಾನಿಕ ಸಲಹೆಯನ್ನು ಪ್ರತಿ ತಾಯಂದಿರು ಪಡೆಯಬೇಕು. ಪೋಷಣ್ ಅಭಿಯಾನದ ಪಂಚ ಸೂತ್ರಗಳಾದ ಗುಣಮಟ್ಟ , ರಕ್ತಹೀನತೆ, ಅತಿಸಾರ, ನೈರ್ಮಲ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಗರ್ಭಿಣಿಯರು ಹೆಚ್ಚು ಗಮನಹರಿಸಬೇಕು ಎಂದರು.
ಮಗು ಮತ್ತು ತಾಯಿ ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿರಲು ಪೌಷ್ಠಿಕ ಆಹಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರಕಾರ ತಾಯಿ ಹಾಗೂ ಮಗುವಿನ ಪೌಷ್ಟಿಕತೆ ಹೆಚ್ಚಿಸಲು ಅಂಗನವಾಡಿಗಳ ಮೂಲಕ ದೊರಕುವ ಪೌಷ್ಟಿಕ ಆಹಾರವನ್ನು ಪಡೆದು ಸೇವಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆಯ ತೊಂದರೆಯನ್ನು ತಡೆಯಲು ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆಯುವುದರ ಜೊತೆಗೆ ಪ್ರತಿಯೊಬ್ಬ ಮಹಿಳೆಯ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಚಂಚಲ ತೇಜೋಮಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಶ್ಯಾಮಲಾ, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.







