ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸಿಡಿ ಬಗ್ಗೆ ಆಸಕ್ತಿ ಇಲ್ಲ: ಕುಮಾರಸ್ವಾಮಿ

ಬಸವಕಲ್ಯಾಣ, ಮಾ.25: ಬಸವಕಲ್ಯಾಣ ಕ್ಷೇತ್ರದಲ್ಲಿ ಜನತಾದಳ ಹಾಗೂ ಜೆಡಿಎಸ್ ಅಭ್ಯರ್ಥಿಗಳು 7 ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ನಮ್ಮ ಅಭ್ಯರ್ಥಿ ಸೈಯ್ಯದ್ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಜನತೆಯ ವಿಶ್ವಾಸವನ್ನು ಗಳಿಸಲು 15 ದಿನ ಇಲ್ಲೆ ವಾಸ್ತವ್ಯ ಹೂಡಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಬಸವಕಲ್ಯಾಣ ತಾಲೂಕು ಕಚೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯ್ಯದ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಹಾಗೂ ನಂತರ ಮೈತ್ರಿ ಸರಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಬಸವಕಲ್ಯಾಣದಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೆ. ಗ್ರಾಮ ವಾಸ್ತವ್ಯ ಮಾಡಿ ಜನರ ಸಂಕಷ್ಟಗಳನ್ನು ಆಲಿಸಿದ್ದೆ ಎಂದರು.
ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಮುಚ್ಚಿ ಹೋಗಿದ್ದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 20 ಕೋಟಿ ರೂ.ಹಣ ನೀಡಿ ಪುನಃ ಆರಂಭಿಸುವಂತೆ ಮಾಡಿದ್ದೆ. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ಪುನಃ ಮುಚ್ಚಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ರೈತರ ವಿರೋಧಿ ಪಕ್ಷಗಳು ಎಂದು ಅವರು ಕಿಡಿಗಾರಿದರು.
ಯುವಕರು, ರೈತರು, ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವ ನಮ್ಮ ಮುಂದಿನ ಹೋರಾಟಕ್ಕೆ ಬಸವಕಲ್ಯಾಣದ ಜನತೆಯ ಆಶೀರ್ವಾದ ಪಡೆಯಲು ಬಂದಿದ್ದೇವೆ. ಮುಂದಿನ 15 ದಿನಗಳ ಕಾಲ ನಾನು ಇಲ್ಲೆ ಬಸವಕಲ್ಯಾಣದಲ್ಲಿ ವಾಸ್ತವ್ಯ ಮಾಡಿ, ಪಕ್ಷದ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಜನರ ವಿಶ್ವಾಸಗಳಿಸಲು ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿಯವರು ಲೂಟಿ ಹೊಡೆದು ಇಟ್ಟುಕೊಂಡಿರುವ ಹಣದ ಹೊಳೆಯನ್ನು ಹರಿಸುತ್ತಾರೆ. ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎನ್ನುತ್ತಾರೆ. ಆದರೆ, ಮತ ಕೊಟ್ಟ ಜನರನ್ನು ಅವರು ಮರೆಯುವುದು ಸರ್ವೆ ಸಾಮಾನ್ಯ. ಈಗಾಗಲೆ 16-17 ಉಪ ಚುನಾವಣೆಯಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಮಾತು ಕೊಟ್ಟಿದ್ದರೋ, ಅಲ್ಲಿ ಯಾವ ಕೆಲಸವೂ ಆಗಿಲ್ಲ. ಬಿಜೆಪಿ ನೀಡುವ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದು ಅವರು ಕೋರಿದರು.
ಸಿಡಿ ಬಗ್ಗೆ ಆಸಕ್ತಿ ಹೊಂದಿಲ್ಲ: ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸಿಡಿ ಬಗ್ಗೆ ನಾನು ಆಸಕ್ತಿ ಹೊಂದಿಲ್ಲ. ಕಾಂಗ್ರೆಸ್, ಬಿಜೆಪಿ ಅದರಲ್ಲಿ ಮಗ್ನರಾಗಿದ್ದಾರೆ. ನಾಡಿನ ಜನತೆಯ ಸಂಕಷ್ಟಗಳಿಗೆ ಗಮನ ಕೊಡುತ್ತಿಲ್ಲ. ಇವರು ರಾಜ್ಯದ ಜನತೆಯ ಬಗ್ಗೆ ಕಳಕಳಿ ಇಟ್ಟಿದ್ದಾರೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಆ ಹೆಣ್ಣು ಮಗಳಿಗೆ ಹೇಳುತ್ತೇನೆ, ಯಾರ ಕುತಂತ್ರ, ಚಿತಾವಣೆಗೂ ಬಲಿಯಾಗಬೇಡ. ನಿನ್ನ ಜೀವಕ್ಕೆ ಅಪಾಯ ಆಗುವ ಪರಿಸ್ಥಿತಿ ನಿರ್ಮಾಣವಾದರೆ ಇವರ್ಯಾರು ರಕ್ಷಣೆ ಕೊಡುವುವವರಲ್ಲ. ಗೌಪ್ಯ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡುವುದರಿಂದ ನಿನ್ನ ಹೋರಾಟದ ಕಳಕಳಿಗೆ ಫಲ ಸಿಗುವುದಿಲ್ಲ. ಸರಕಾರದ ಮೇಲೆ ನಿನಗೆ ವಿಶ್ವಾಸವಿಲ್ಲದಿದ್ದರೆ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡಿ ರಕ್ಷಣೆ ಪಡೆಯಿರಿ. ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ನಂಬಿಕೆ ಇದ್ದರೆ ಅವರನ್ನು ಭೇಟಿ ಮಾಡಿ ರಕ್ಷಣೆ ಪಡೆಯಿರಿ. ಇಲ್ಲದಿದ್ದರೆ, ನೇರವಾಗಿ ಪ್ರಧಾನಿಗೆ ಸಂದೇಶ ಕಳುಹಿಸಿ ಅವರ ನೆರವು ಪಡೆದುಕೊಳ್ಳಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಕೋವಿಡ್ ಸಮಸ್ಯೆ, ರೈತರ ಬಾಳು ಹಾಳಾಗಿದೆ, ಯುವಕರಿಗೆ ಉದ್ಯೋಗವಿಲ್ಲ. ಕಳೆದ ಒಂದು ವರ್ಷದಿಂದ ಉದ್ಯೋಗ ಇಲ್ಲದೆ ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಇಂತಹ ಸಂದರ್ಭದಲ್ಲಿ ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುವುದು ಸರಿಯಲ್ಲ ಎಂದು ಅವರು ಕಾಂಗ್ರೆಸ್, ಬಿಜೆಪಿ ಮುಖಂಡರಿಗೆ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಜೆಡಿಎಸ್ ಅಭ್ಯರ್ಥಿ ಸೈಯ್ಯದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







