ರಕ್ಷಣೆ ನೀಡುವುದು ಸರಕಾರದ ಮೂಲಭೂತ ಕರ್ತವ್ಯ: ಡಿ.ಕೆ.ಶಿವಕುಮಾರ್
ಸಿಡಿ ಪ್ರಕರಣ

ಬೆಂಗಳೂರು, ಮಾ.25: ‘ರಕ್ಷಣೆ ನೀಡುವುದು, ದೌರ್ಜನ್ಯವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಮೂಲಭೂತ ಕರ್ತವ್ಯ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಬೇಕಾಗಿರುವುದನ್ನೆಲ್ಲಾ ಸದನದಲ್ಲಿ ಹೇಳಿದ್ದೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಂತ್ರಸ್ತ ಯುವತಿಯ ವಿಡಿಯೋ ನಾನು ನೋಡಿಲ್ಲ. ಈಗಷ್ಟೇ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಎಕನಾಮಿಕ್ ಅಫೆನ್ಸ್ ಪ್ರಕರಣದ ವಿಚಾರಣೆ ಇತ್ತು. ಅದಕ್ಕೆ ಹಾಜರಾಗಿ ಈಗಷ್ಟೇ ಬಂದಿದ್ದೇನೆ. ಕಳೆದ ಬಾರಿ ಹೋಗಲು ಆಗಿರಲಿಲ್ಲ. ಹೀಗಾಗಿ ಇವತ್ತು ಹೋಗಿ ಬಂದಿದ್ದೇನೆ. ಈ ವಿಡಿಯೋ ಏನು ಎಂಬುದನ್ನು ನೋಡುತ್ತೇನೆ’ ಎಂದು ತಿಳಿಸಿದರು.
‘ಈ ವಿಚಾರದಲ್ಲಿ ನನ್ನದೇನು ಹೇಳಲು ಇಲ್ಲ. ನಾನು ಏನೇನು ಮಾತನಾಡಬೇಕೋ ಅದನ್ನು ಸದನದಲ್ಲಿ ಮಾತನಾಡಿದ್ದೇನೆ. ಮಿಕ್ಕಿದ್ದನ್ನು ವಿಡಿಯೋ ನೋಡಿದ ನಂತರ ನಿರ್ಧರಿಸುತ್ತೇನೆ’ ಎಂದ ಅವರು, ಇನ್ನು ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ, ‘ಅವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡುವುದು ಬೇಡ ಎಂದು ಹೇಳಿದವರು ಯಾರು? ಅದರಲ್ಲಿ ಶಾಕ್ ಆದರೂ ಇರಲಿ, ಏನಾದರೂ ಇರಲಿ. ಅವರಿಗೆ ಒಳ್ಳೆಯದಾಗಲಿ ಪಾಪ’ ಎಂದರು.







