ಮನಪಾ ವಿರೋಧ ಪಕ್ಷದ ನಾಯಕನಾಗಿ ವಿನಯರಾಜ್ ಅಧಿಕಾರ ಸ್ವೀಕಾರ

ಮಂಗಳೂರು, ಮಾ. 25: ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನಾಗಿ ಎ.ಸಿ. ವಿನಯರಾಜ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಜೋಡೆತ್ತಿನಂತೆ ಕೆಲಸ ಮಾಡಬೇಕು. ಆಡಳಿತ ಪಕ್ಷಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ವಿರೋಧಪಕ್ಷದ ಮೇಲೆ ಇರುತ್ತದೆ. ಆಡಳಿತ ಪಕ್ಷ ಮಾಡು ವಂತಹ ಉತ್ತಮ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವುದು, ಅಗತ್ಯ ಸಲಹೆ ಸೂಚನೆ ನೀಡುವಂತಹದ್ದು ಪ್ರತಿಪಕ್ಷದ ಜವಾಬ್ದಾರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷ ಕೊಟ್ಟಂತಹ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ಇತರ ಸಹ ಸದಸ್ಯರು ಹಾಗೂ ಹಿರಿಯ ಸದಸ್ಯರ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಉದ್ದಿಮೆ ಪರವಾನಿಗೆ, ಇ-ಖಾತಾ, ಜನನ-ಮರಣ ಪ್ರಮಾಣಪತ್ರ, ನೀರಿನ ಬಿಲ್ ಸಹಿತ ಮುಂತಾದ ಸಮಸ್ಯೆಗಳಿಂದ ಮಹಾ ನಗರ ಪಾಲಿಕೆ ವ್ಯಾಪ್ತಿಯ ಜನರು ಬವಣೆ ಪಡುತ್ತಿದ್ದಾರೆ. ಈ ವಿಚಾರವಾಗಿ ಆಡಳಿತ ಪಕ್ಷವನ್ನು ಎಚ್ಚರಿಸುವಂತಹ ಕೆಲಸ ಮಾಡಲಾಗುವುದು. ಸಾರ್ವಜನಿಕರಿಗೆ ಮಹಾನಗರ ಪಾಲಿಕೆಯಲ್ಲಿ ಯಾವುದೇ ರೀತಿಯಲ್ಲಿ ಕ್ಲಪ್ತ ಸಮಯದಲ್ಲಿ ಅವರ ಕೆಲಸ ಕಾರ್ಯಗಳು ಆಗದಿದ್ದಲ್ಲಿ ಕಚೇರಿ ಸಂಪರ್ಕಿಸಬಹುದು ಎಂದರು.
ಅಧಿಕಾರಿ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ಸಭಾ ಮಾಜಿ ಸದಸ್ಯ ಬಿ.ಇಬ್ರಾಹಿಂ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಹರಿನಾಥ, ಜೆಸಿಂತಾ ಆಲ್ಫ್ರೆಡ್, ಉಪ ಮೇಯರ್ ಮುಹಮ್ಮದ್ ಕುಂಜತ್‌ಬೈಲ್, ರಜನೀಶ್, ಲಾನ್ಸ್‌ಲಾಟ್ ಪಿಂಟೊ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು, ನಿಕಟಪೂರ್ವ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಪಾಲಿಕೆಯ ಸದಸ್ಯರಾದ ನವೀನ್ ಡಿಸೋಜ, ಪ್ರವೀಣ್ ಚಂದ್ರ ಆಳ್ವ, ಅನಿಲ್‌ಕುಮಾರ್, ಕೇಶವ, ಸಂಶುದ್ದೀನ್, ಝೀನತ್, ಅಬ್ದುಲ್ ಸಲೀಂ, ಪ್ರಕಾಶ್ ಬಿ. ಸಾಲ್ಯಾನ್, ಸದಾಶಿವ ಶೆಟ್ಟಿ, ಮುಲ್ಕಿ ಬ್ಲಾಕ್‌ನ ಅಧ್ಯಕ್ಷ ವೆಲೇರಿಯನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.
ಮನಪಾದ 40ನೇ ವಾರ್ಡ್ ಸದಸ್ಯರಾದ ಎ.ಸಿ. ವಿನಯರಾಜ್, ವೃತ್ತಿಯಲ್ಲಿ ನ್ಯಾಯವಾದಿ. 2ನೇ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಾಲಿಕೆಯ ಆರೋಗ್ಯ ಸಮಿತಿ, ಸ್ಥಾಯಿ ಸಮಿತಿ ಮತ್ತು ಹಣಕಾಸು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.







