ರಾಜಾ ಕಾಲುವೆಯ ದುರಸ್ತಿ ನಂತರ ಉಳಿಸಿದ್ದ ಸಾಮಗ್ರಿ ತೆರವು; ಪತ್ರಿಕಾ ಪ್ರಕಟಣೆಗೆ ಸ್ಪಂದಿಸಿದ ಮನಪಾ: ವೆಲ್ಪೇರ್ ಪಾರ್ಟಿ

ಮಂಗಳೂರು : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಪಾಂಡೇಶ್ವರದಲ್ಲಿನ ರಾಜಾ ಕಾಲುವೆಯ ಒಂದು ಬದಿಯ ತಡೆಗೋಡೆ ದುರಸ್ತಿಗೊಳಿಸಿದ ನಂತರ ಅಲ್ಲಿ ಮಿಕ್ಕುಳಿದ ಸಾಮಗ್ರಿಗಳನ್ನೂ ತೆರವುಗೊಳಿಸದೆ, ರಸ್ತೆ ಬದಿಯಲ್ಲಿ ಎಸೆದಂತೆ ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೋಗಿರುವುದನ್ನು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿ, ಸಾರ್ವಜನಿಕರ ಗಮನ ಸೆಳೆದಿತ್ತು.
ಪ್ರಸ್ತುತ ಚಿತ್ರಸಹಿತ ವರದಿಯನ್ನು ಐದು ದಿನಗಳ ಹಿಂದೆ 'ವಾರ್ತಾಭಾರತಿ' ಪ್ರಕಟಿಸಿದ ನಂತರ ಸ್ಪಂದಿಸಿರುವ ಮಂಗಳೂರು ಮಹಾನಗರ ಪಾಲಿಕೆ ಇದೀಗ ಅವೆಲ್ಲವುಗಳನ್ನು ಅಲ್ಲಿಂದ ಖಾಲಿ ಮಾಡಿಸಿ ಜನರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಇದು ನಮ್ಮ ಪಕ್ಷವು ಸಮಾಜದ ಸಮಸ್ಯೆಗಳನ್ನು ಹುಡುಕಿ ಪಕ್ಷದ ವತಿಯಿಂದ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಜನ ಜಾಗೃತಿಗೊಳಿಸುವ ಶ್ರಮಕ್ಕೆ ಸಂದ ಜಯವೆಂದು ಬಣ್ಣಿಸಿದ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ಇಷ್ಟೊಂದು ಸಮಾಜಮುಖಿ ಕಾರ್ಯಗಳನ್ನು ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲಿದ್ದು ಈ ನಿಟ್ಟಿನಲ್ಲಿ ನಮಗೆ ಸಾರ್ವಜನಿಕ ಸಹಕಾರದ ಅಗತ್ಯವಿದೆ ಎಂಬುವುದಾಗಿ ತಮ್ಮ ಪ್ರಕಟಣೆಯಲ್ಲಿ ಹೇಳಿದರು.







