ಇಂದು ಭಾರತ್ ಬಂದ್: ದಿಲ್ಲಿ-ಗಾಝಿಪುರ ಗಡಿ ಬಂದ್ ಮಾಡಿದ ರೈತರು

photo: ANI
ಹೊಸದಿಲ್ಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ನಾಲ್ಕು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ದೇಶದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ.
ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ದೇಶಾದ್ಯಂತ ಭಾರತ್ ಬಂದ್ ಬೆಳಗ್ಗೆ 6ರಿಂದ ಸಂಜೆ 6 ರ ತನಕ ಶಾಂತಿಯುತವಾಗಿ ಆಚರಿಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ರೈತರು ದಿಲ್ಲಿ-ಗಾಝಿಪುರ ಗಡಿಯನ್ನು ಬಂದ್ ಮಾಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸದಂತೆ ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ. ಅಂಬಾಲದಲ್ಲಿ ಪ್ರತಿಭಟನಾಕಾರರು ಜಿಟಿ ರೋಡ್ ಹಾಗೂ ಶಹಾಪುರದ ರೈಲ್ವೆ ಹಳಿಯನ್ನು ಬಂದ್ ಮಾಡಿದ್ದಾರೆ.
ರಾಷ್ಟ್ರವ್ಯಾಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಂಜಾಬ್ ಹಾಗೂ ಹರ್ಯಾಣದ ಹಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಹಾಗೂ ಕೆಲವು ರೈಲ್ವೆ ಹಳಿಗಳಲ್ಲಿ ರೈತರು ಜಮಾಯಿಸಿದ್ದು, ದಿಲ್ಲಿಯಲ್ಲಿ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಿದೆ.
ಪಂಜಾಬಿನ ಅಮೃತಸರದಲ್ಲಿ ರೈತರು ರೈಲ್ವೆ ಹಳಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ವೇಳೆ ಗಾಝಿಪುರ ಬಾರ್ಡರ್ ಎನ್ ಎಚ್ 24ನಲ್ಲಿ ಸಂಚಾರವನ್ನು ಮುಚ್ಚಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಡಪಕ್ಷಗಳ ಕಾರ್ಯಕರ್ತರು ರಸ್ತೆಗಳನ್ನು ತಡೆದು ಕೇಂದ್ರ ಸರಕಾರದ ನೀತಿಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.







