ಮಾ.28ರಂದು ‘ನೀಲಿ ಬಯಲು' ಕವನ ಸಂಕಲನ ಬಿಡುಗಡೆ

ಭಟ್ಕಳ : ತಾಲೂಕಿನ ಗೊಂಡ ಬುಡಕಟ್ಟು ಸಮುದಾಯದ ಎಂ.ಜಿ ತಿಲೋತ್ತಮೆ ಅವರ 'ನೀಲಿ ಬಯಲು' ಕವನ ಸಂಕಲನ ಮಾ.28 ರಂದು ಜಿಲ್ಲೆಯ ಹಿರಿಯ ಸಾಹಿತಿ ಅಂಜುಮನ್ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶಪಾಲ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಬಿಡುಗಡೆಗೊಳಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುಮಕೂರಿನ ಭಾವ ಸಿಂಚನ ಪ್ರಕಾಶನ ಪ್ರಕಾಶಿಸಿರುವ ಈ ಕವನ ಸಂಕಲನದ ಬಿಡುಗಡೆ ಸಮಾರಂಭವು ಮಾ.28ರಂದು ಮಧ್ಯಾಹ್ನ 3ಕ್ಕೆ ತಾಲೂಕಿನ ಕೋಕ್ತಿ ನಗರದ ಶ್ರೀ ಮಹಾಸತಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಹಾಗೂ 'ಸಂಪ್ರಭಾ' ಪತ್ರಿಕೆಯ ಸಂಪಾದಕ ಸುಮುಖಾನಂದ ಜಲವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಶ್ರೀಧರ್ ಶೇಟ್ ಶಿರಾಲಿ ಕೃತಿ ಪರಿಚಯ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕವಿ ರಾಮಮೂರ್ತಿ ನಾಯಕ ಅಂಕೋಲಾ, ಭಟ್ಕಳ ತಾಲೂಕು ಕಸಾಪ ಅಧ್ಯಕ್ಷ ಶಂಕರ ನಾಯ್ಕ ಶಿರಾಲಿ, ಭಾವನಾ ಟಿವಿಯ ಸಂಪಾದಕ ಭವಾನಿಶಂಕರ ನಾಯ್ಕ, ಭಟ್ಕಳ ಗೊಂಡ ಅಭಿವೃದ್ಧಿ ಸಂಘದ ಬಸವಯ್ಯ ಗೊಂಡ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕವಯಿತ್ರಿಯ ಕಿರು ಪರಿಚಯ : ಕವಯಿತ್ರಿ ಎಂ.ಜಿ.ತಿಲೋತ್ತಮೆ 2013ನೇ ಸಾಲಿನಲ್ಲಿ 'ನಾ ಅಬಲೆಯಲ್ಲ' ಕವನ ಸಂಕಲನ ಲೋಕಾರ್ಪಣೆ ಮಾಡಿದ್ದರು. 2016ರಂದು ಇವರಿಗೆ ಜಿಲ್ಲಾ ರಾಜ್ಯೋತ್ಸವ ಯುವ ಬರಹಗಾರ ಪ್ರಶಸ್ತಿ ಲಭಿಸಿದೆ. ಸದಾ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಇವರು ಕೆಲವು ಸಾಹಿತ್ಯಿಕ ಸಂಘಟನೆಗಳು ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸನ್ಮಾನ ಹಾಗೂ ಪ್ರಶಸ್ತಿಗಳಿಗೆ ಭಾಜಿನರಾಗಿದ್ದಾರೆ.
ಪುಸ್ತಕ ಓದು ಇವರ ಹವ್ಯಾಸಗಳಲ್ಲಿ ಒಂದಾಗಿದ್ದು, 'ನುಡಿಜೇನು' ಪತ್ರಿಕೆಯಲ್ಲಿ 'ಪುಸ್ತಕ ಲೋಕ' ಶೀರ್ಷಿಕೆಯಲ್ಲಿ ಪ್ರತಿ ವಾರ ಅಂಕಣವನ್ನೂ ಬರೆಯುತ್ತಿದ್ದಾರೆ. ಹಲವು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಕವಿತೆ, ಲೇಖನ, ಕಥೆಗಳು ಪ್ರಕಟಗೊಂಡಿದೆ. 'ನೀಲಿ ಬಯಲು' ಇವರ ಎರಡನೇ ಕವನ ಸಂಕಲನ.







