2ನೇ ಏಕದಿನ ಪಂದ್ಯ: ಇಂಗ್ಲೆಂಡ್ ಗೆ ಕಠಿಣ ಗುರಿ ನೀಡಿದ ಭಾರತ
ಶತಕ ಸಿಡಿಸಿದ ರಾಹುಲ್, ಪಂತ್, ಕೊಹ್ಲಿ ಅರ್ಧಶತಕ

ಪುಣೆ: ಇಂಗ್ಲೆಂಡ್ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಎರಡನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಆಕರ್ಷಕ ಶತಕ, ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕಗಳ ನೆರವಿನಿಂದ ಭಾರತವು ಸವಾಲಿನ ಮೊತ್ತ ಕಲೆ ಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 336 ರನ್ ಗಳಿಸಿದೆ.
ಭಾರತದ ಪರವಾಗಿ ರೋಹಿತ್ ಶರ್ಮಾ(25) ಹಾಗೂ ಶಿಖರ್ ಧವನ್(4) ಇನಿಂಗ್ಸ್ ಆರಂಭಿಸಿದರು. ಆದರೆ ಇವರಿಬ್ಬರು ಉತ್ತಮ ಆರಂಭ ಒದಗಿಸಲು ವಿಫಲರಾದರು. ಧವನ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ರೋಹಿತ್ ಶರ್ಮಾ ಔಟಾದ ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆ ಕೈಜೋಡಿಸಿದ ಕೆ.ಎಲ್. ರಾಹುಲ್ 3ನೇ ವಿಕೆಟ್ ಗೆ 121 ರನ್ ಜೊತೆಯಾಟ ನಡೆಸಿದರು. ಕೊಹ್ಲಿ 66 ರನ್ (79 ಎಸೆತ, 3 ಬೌಂ. 1 ಸಿಕ್ಸರ್) ಗಳಿಸಿ ಔಟಾದ ಬಳಿಕ ರಿಷಭ್ ಪಂತ್(77, 40 ಎಸೆತ, 3 ಬೌಂಡರಿ, 7 ಸಿಕ್ಸರ್) ಜೊತೆ ಇನಿಂಗ್ಸ್ ಕಟ್ಟಿದ ರಾಹುಲ್ 4ನೇ ವಿಕೆಟ್ ಜೊತೆಯಾಟದಲ್ಲಿ 113 ರನ್ ಸೇರಿಸಿದರು.
ಇದೇ ವೇಳೆ ರಾಹುಲ್ 108 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಗಳ ನೆರವಿನಿಂದ ಶತಕ ಪೂರೈಸಿದರು. ರಾಹುಲ್ ತಾನಾಡಿದ 37ನೇ ಪಂದ್ಯದಲ್ಲಿ ಐದನೇ ಶತಕ ಸಿಡಿಸಿ ಸಂಭ್ರಮಿಸಿದರು. ರಾಹುಲ್ 108 ರನ್ (114 ಎಸೆತ, 7 ಬೌಂಡರಿ, 2 ಸಿಕ್ಸರ್)ಗಳಿಸಿ ಕರನ್ ಗೆ ವಿಕೆಟ್ ಒಪ್ಪಿಸಿದರು.
ಹಾರ್ದಿಕ್ ಪಾಂಡ್ಯ 35 ರನ್ ಗಳಿಸಿದರು. ಇಂಗ್ಲೆಂಡ್ ಪರವಾಗಿ ರೀಸಿ ಟೋಪ್ಲೆ(2-50) ಹಾಗೂ ಟಾಮ್ ಕರನ್ (2-83)ತಲಾ ಎರಡು ವಿಕೆಟ್ ಗಳನ್ನು ಪಡೆದಿದ್ದಾರೆ.







