ಬೆಂಗಳೂರು: ಯುವಕನನ್ನು ಅಪಹರಿಸಿ 2 ಕೋಟಿ ರೂ.ಗೆ ಬೇಡಿಕೆ; ಪ್ರಕರಣ ಭೇದಿಸಿದ ಪೊಲೀಸರು

ಬೆಂಗಳೂರು, ಮಾ.26: ಶಿಕ್ಷಣ ಸಂಸ್ಥೆಯೊಂದರ ಮಾಲಕರ ಪುತ್ರನನ್ನು ಅಪಹರಿಸಿ 2 ಕೋಟಿ ರೂ.ಗಳ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ತ್ವರಿತವಾಗಿ ಕಾರ್ಯಾಚರಣೆ ನಡೆಸಿ, ಪ್ರಕರಣ ಭೇದಿಸುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡಗೊಂಡನಹಳ್ಳಿಯ ಅಬ್ದುಲ್ ಫಹಾದ್, ಝಬೀವುಲ್ಲಾ, ಸಲ್ಮಾನ್, ತೌಫಿಕ್ ಪಾಷಾ ಎಂಬವರನ್ನು ಬಂಧಿಸಲಾಗಿದೆ ಎಂದರು.
ಪ್ರಕರಣದ ಸೂತ್ರಧಾರ ಅಬ್ದುಲ್ ಫಹಾದ್, 2018ರ ಸಾಲಿನಲ್ಲಿ ಜನೀಫರ್ ಎಂಬಾಕೆಯನ್ನು ಅಪಹರಿಸಿದ ಕೃತ್ಯ ದಾಖಲಾಗಿದೆ. ಅದೇ ರೀತಿ, ಮಾ.25 ರಂದು ಮಧ್ಯಾಹ್ನ ಶಿಕ್ಷಣ ಸಂಸ್ಥೆಯೊಂದರ ಮಾಲಕರ ಪುತ್ರ ರಫೀದ್ ಅರಾಫತ್(22) ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಹೋಗಿದ್ದು, ನಂತರ ಅವರ ತಂದೆಗೆ ಪರಿಚಯಸ್ಥರು ಮೊಬೈಲ್ ಕರೆ ಮಾಡಿ ನಿಮ್ಮ ಮಗನನ್ನು ನಾಲ್ವರು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋದರು ಎಂದು ತಿಳಿಸಿದ್ದಾರೆ.
ಕೂಡಲೇ ಪುತ್ರನ ಮೊಬೈಲ್‍ಗೆ ಕರೆ ಮಾಡಿದಾಗ ಮೊಬೈಲ್ ಸಂಪರ್ಕ ಕಡಿತ ಆಗಿದ್ದು, ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಎಲ್ಲಿಯೂ ಆತನ ಸುಳಿವಿರಲಿಲ್ಲ. ಅಪಹರಿಸಿದ 2 ಗಂಟೆಗಳ ನಂತರ ಅಪರಿಚಿತ ವ್ಯಕ್ತಿಗಳು ಅರಾಫತ್ ತಂದೆಗೆ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಲಾಗಿದ್ದು, 2 ಕೋಟಿ ರೂ. ನೀಡಿದರೆ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ, ಆತನ ಕೈ-ಕಾಲು ಕತ್ತರಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಾಡಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ ಡಿಸಿಪಿ ಡಾ.ಶರಣಪ್ಪ ಅವರು ಎಸಿಪಿ ಸಕ್ರಿ ಅವರ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನು ರಚಿಸಿದ್ದರು. ವಿಶೇಷ ತಂಡಗಳು ಅಪಹರಣವಾದ ಯುವಕನ ಮತ್ತು ಆರೋಪಿಗಳ ಪೂರ್ವಾಪರ ಮಾಹಿತಿ ಸಂಗ್ರಹಿಸಿ ತಂತ್ರಜ್ಞಾನ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಆರೋಪಿಗಳು ಹೆಚ್ಚಿನ ಸಾಲ ಮಾಡಿಕೊಂಡಿದ್ದು, ಸುಲಭವಾಗಿ ಹಣ ಗಳಿಸಲು ಒಂದು ವಾರದ ಹಿಂದೆಯೇ ಒಟ್ಟಾಗಿ ಸೇರಿ ಶ್ರೀಮಂತರ ಮಕ್ಕಳನ್ನು ಅಪಹರಿಸಿ ಹಣ ಗಳಿಸಲು ಮುಂದಾಗಿದ್ದರು. ಅದರಂತೆ ಸಂಚು ರೂಪಿಸಿ ಶ್ರೀಮಂತರ ಮನೆಯ ರಫೀದ್ ಅರಾಫತ್‍ನ ಮಾಹಿತಿ ಸಂಗ್ರಹಿಸಿ ಆತ ಶಿಕ್ಷಣ ಸಂಸ್ಥೆಯ ಮಾಲಕನ ಮಗನೆಂದು ತಿಳಿದು ಅಪಹರಿಸಲು ಮುಂದಾಗಿದ್ದರು. ಅದರಂತೆ ಕೃತ್ಯಕ್ಕೂ 2 ದಿನಗಳ ಮುಂದೆ ಅಪಹರಣ ನಡೆಸಲು ಪ್ರಯತ್ನಿಸಿ ವಿಫಲರಾಗಿ, ಮಾ. 25 ರಂದು ಯುವಕನನ್ನು ಸ್ನೇಹಿತನ ಮೂಲಕ ಕರೆ ಮಾಡಿ ಕರೆಸಿಕೊಂಡು ರಿಂಗ್‍ರಸ್ತೆಯಲ್ಲಿ ಸುತ್ತಾಡುತ್ತ 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು ನಂತರ ಆವಲಹಳ್ಳಿ ಯರ್ರಪ್ಪನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಒತ್ತೆ ಇಟ್ಟುಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಯುಕ್ತರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ.ಶರಣಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







