ಕೆಟಿಪಿಪಿ ಕಾಯ್ದೆ ತಿದ್ದುಪಡಿಯಿಂದ ಎಸ್ಸಿ-ಎಸ್ಟಿ ವರ್ಗಕ್ಕೆ ಅನ್ಯಾಯ: ಸಿದ್ದರಾಮಯ್ಯ

ಬೆಂಗಳೂರು, ಮಾ. 26: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ(ಎಸ್ಸಿ-ಎಸ್ಟಿ)ದ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಗೆ (ಕೆಟಿಪಿಪಿ) ತಂದಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಟಿಪಿಟಿ ಕಾಯ್ದೆ ತಿದ್ದುಪಡಿ ಮೂಲಕ ಸರಕಾರ ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡಲಿ ಪೆಟ್ಟು ನೀಡಿದೆ. ಸರಕಾರಿ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಒದಗಿಸುವ ಕಾನೂನನ್ನು ದೇಶದ ಯಾವುದೇ ರಾಜ್ಯವೂ ಜಾರಿಗೆ ತಂದಿಲ್ಲ. ಆದರೆ, ಆ ಸೌಲಭ್ಯವನ್ನು ಬಿಜೆಪಿ ಸರಕಾರ ಕಸಿದುಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದರು.
ಕಾಯ್ದೆ ತಿದ್ದುಪಡಿ ಪ್ರಕಾರ 2 ಕೋಟಿ ರೂ.ಗಳ ವರೆಗಿನ ಕಾಮಗಾರಿಯನ್ನು ಟೆಂಡರ್ ಕರೆಯದೆ ಕೆಆರ್‍ಐಡಿಎಲ್‍ಗೆ ವಹಿಸಬಹುದು. ನಾವು ಅಧಿಕಾರದಲ್ಲಿ ಇದ್ದಾಗ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 50ಲಕ್ಷ ರೂ.ವರೆಗಿನ ಸರಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲು ನೀಡುವ ಕಾನೂನು ಜಾರಿಗೆ ತಂದಿದ್ದೆವು. ಇದರಿಂದ ಆ ವರ್ಗದ ಗುತ್ತಿಗೆದಾರರಿಗೆ ಅನುಕೂಲವಾಗಿತ್ತು. ನನ್ನ ಕೊನೆಯ ಬಜೆಟ್‍ನಲ್ಲಿ ಕಾಮಗಾಗಿ ವೆಚ್ಚವನ್ನು 1ಕೋಟಿ ರೂ.ಗೆ ಏರಿಸುವ ಘೋಷಣೆ ಮಾಡಲಾಗಿತ್ತು. ಆದರೆ, ಮೈತ್ರಿ ಸರಕಾರದ ಅವಧಿಯಲ್ಲಿ ಘೋಷಣೆ ಜಾರಿಗೆ ಬರಲಿಲ್ಲ.
2 ಕೋಟಿ ರೂ.ವರೆಗಿನ ಕಾಮಗಾರಿ ಟೆಂಡರ್‍ನನ್ನು ಭೂ ಸೇನಾ ನಿಗಮಕ್ಕೆ ವಹಿಸಿದರೆ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಭಾರಿ ಅನ್ಯಾಯವಾಗುತ್ತದೆ. ಅವರಿಗೆ ಒದಗಿಸಿರುವ ಮೀಸಲು ಸೌಲಭ್ಯವನ್ನು ಕಸಿಯುವ ಹುನ್ನಾರವನ್ನು ಸರಕಾರ ನಡೆಸಿದೆ. ದಲಿತರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೂ ಸಿಗಬೇಕೆಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ, ರಾಜ್ಯ ಸರಕಾರ ಕಾಯ್ದೆ ತಿದ್ದುಪಡಿ ಮೂಲಕ ದಲಿತರಿಗೆ ದ್ರೋಹ ಮತ್ತು ಅನ್ಯಾಯ ಎಸಗಿದೆ. ಯಾವುದೇ ಸರಕಾರ, ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಕಾನೂನುಗಳನ್ನು ಜಾರಿಗೆ ತರಬೇಕೇ ಹೊರತು ಅವರಿಗೆ ಮಾರಕ ಆಗುವಂತಹ ಕಾಯಿದೆಗಳನ್ನು ಅನುಷ್ಠಾನಗೊಳಿಸಬಾರದು ಎಂದು ಸಲಹೆ ಮಾಡಿದರು.
‘ಟಿಕಾಯತ್ ವಿರುದ್ಧ ಕೇಸು' ಖಂಡನೀಯ
‘ಬೆಂಗಳೂರಿಗೆ ಮುತ್ತಿಗೆ ಹಾಕಿ' ಎಂಬ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಹೇಳಿಕೆಯಲ್ಲಿ ಯಾವ ಪ್ರಚೋದನಕಾರಿ ಅಂಶವಿದೆ. ಅವರ ವಿರುದ್ಧ ಕೇಸು ದಾಖಲು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ರೈತರು ದಿಲ್ಲಿ ಗಡಿಯಲ್ಲಿ 120 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕೇಸು ದಾಖಲು ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ







