ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿರಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಮಾ.26: ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿದಿದ್ದರೂ ಸಹ ಅವುಗಳ ಬಳಕೆ ಮಾಡುವು ದರೊಂದಿಗೆ ವ್ಯಸನಿಗಳಾಗುತ್ತಿದ್ದಾರೆ. ಇವುಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ತಂಬಾಕು ನಿಷೇಧ ಕೋಶ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನವನಿಗೆ ಅಸಾಂಕ್ರಾಮಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದಯ ಸಂಬಂದಿ ಹಾಗೂ ಶ್ವಾಸಕೋಶ ಸಂಬಂಧ ಕಾಯಿಲೆಗಳು ಬರುತ್ತವೆ. ಅವು ಮುಂದಿನ ದಿನಗಳಲ್ಲಿ ಉಲ್ಬಣಗೊಂಡು ವ್ಯಕ್ತಿಯ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಂಬಾಕು ಉತ್ಪನ್ನಗಳ ಬಳೆಯಿಂದ ದೂರವಿರಬೇಕು ಎಂದರು.
ಮಣಿಪಾಲದ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ ನಡೆಸಿದ ಸಮೀಕ್ಷಾ ವರದಿ ಯ ಪ್ರಕಾರ ಮೀನುಗಾರರಲ್ಲಿ ಶೇ.80ರಷ್ಟು ಮೀನುಗಾರರು ತಂಬಾಕು ಉತ್ಪನ್ನಗಳ ವ್ಯಸನರಾಗಿದ್ದಾರೆ. ಇವುಗಳ ಬಳಕೆಯಿಂದ ತಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ತಿಳಿದಿದ್ದರೂ ಸಹ ಅವರು ಅವುಗಳ ಬಳಕೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ತಂಬಾಕು ಉತ್ಪನ್ನಗಳ ಬಳಕೆಯ ತಂತ್ರಕ್ಕೆ, ಪ್ರತಿತಂತ್ರಗಳ ಅಭಿಯಾನ ಮತ್ತು ಅದರಿಂದ ದೂರವಿರಲು ಹೆಚ್ಚಿನ ಮಾಹಿತಿಗಳನ್ನು ಮೀನುಗಾರರಿಗೆ ನೀಡಿ ಮನವರಿಕೆ ಮಾಡಬೇಕು ಎಂದರು.
ತಂಬಾಕು ಮುಕ್ತ ವಲಯಗಳೆಂದು ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್, ಮರವಂತೆ, ಕೋಡಿಬೆಂಗ್ರೆ, ವಿನಾಯಕ್‌ಕೋಡಿ, ಗಂಗೊಳ್ಳಿ ಬೀಚ್‌ಗಳಲ್ಲಿ ಹೋರ್ಡಿಂಗ್ಸ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಜಿಲ್ಲೆಯಲ್ಲಿ ಈವರೆಗೆ ವಿವಿಧೆಡೆ ಕೋಟ್ಪಾ ನಿಯಂತ್ರಣ ತನಿಖಾ ದಳದ ವತಿಯಿಂದ ದಾಳಿ ನಡೆಸಿ, 224 ಪ್ರಕರಣಗಳನ್ನು ದಾಖಲಿಸಿಕೊಂಡು 49,850 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದರು.
ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ತಂಬಾಕು ಮುಕ್ತ ಹಳ್ಳಿಯನ್ನು ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದ ಅವರು, ಶಿಕ್ಷಣ ಸಂಸ್ಥೆಗಳ 100 ಗಜದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಶಿಕ್ಷಣ ಸಂಸ್ಥೆಯನ್ನು ಸಂಪೂರ್ಣವಾಗಿ ತಂಬಾಕು ಮುಕ್ತವನ್ನಾಗಿಸಲು ಮುಂದಾಗಬೇಕು ಎಂದರು. ಸಬೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅದಿಕಾರಿ ಡಾ. ಎಂ.ಜಿ. ರಾಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಹಾಗೂ ಆರೊೀಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.







