'ಆರೋಪಿಯ ರಕ್ಷಣೆಗೆ ನಿಂತು ರಾಜ್ಯದ ಮರ್ಯಾದೆ ಕಳೆಯದಿರಿ': ರಮೇಶ್ ಜಾರಕಿಹೊಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಬೆಂಗಳೂರು, ಮಾ.26: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೇ, ದೂರು ಬರುವವರೆಗೂ ದೂರು ಬರಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದೀರಿ, ಈಗ ದೂರು ಬಂದಿದೆ ಇನ್ನೂ ಏಕೆ ತಡಮಾಡುತ್ತಿದ್ದೀರಿ? ಯುವತಿಯ ದೂರಿನ ಪ್ರಕಾರ ಕ್ರಮ ಕೈಗೊಂಡು, ಅತ್ಯಾಚಾರದ ಪ್ರಕರಣ ದಾಖಲಿಸಿ, ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಕೂಡಲೇ ಬಂಧಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಅಂತಹ ಸರಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ’ ‘ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ’ ಇದು ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳು. ಪ್ರಕರಣದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು, ದಿಕ್ಕುತಪ್ಪಿಸಲು ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ಈ ಹೇಳಿಕೆಗಳು ಸಾಕ್ಷಿ. ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಅವಕಾಶ ನೀಡದಂತೆ ಕೂಡಲೇ ಬಂಧಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಮೇಶ್ ಜಾರಕಿಹೊಳಿ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳು ಅವರ ಮಾತಿನಿಂದಲೇ ತಿಳಿಯುತ್ತಿದೆ. ಈ ಪ್ರಕರಣ ದೇಶದ ಗಮನ ಸೆಳೆದಿದ್ದು ರಾಜ್ಯದ ಘನತೆಗೆ, ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದ್ದಾಗಿದೆ. ಸರಕಾರ ಆರೋಪಿಯ ರಕ್ಷಣೆಗೆ ನಿಂತು ಮತ್ತಷ್ಟು ರಾಜ್ಯದ ಮರ್ಯಾದೆ ಕಳೆಯದೆ, ಕೂಡಲೇ ಬಂಧಿಸುವ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.





