ಎ.16ರಿಂದ 30: ಉಡುಪಿ ಜಿಲ್ಲೆಯಲ್ಲಿ ಜಂತುಹುಳು ನಿವಾರಣಾ ಮಾತ್ರೆ ವಿತರಣೆ
ಉಡುಪಿ, ಮಾ.26: ಜಿಲ್ಲೆಯಲ್ಲಿ 1ರಿಂದ 19 ವರ್ಷದ ಒಳಗಿನ ಪ್ರತಿಯೊಬ್ಬರಿಗೂ ಜಂತುಹುಳು ನಿವಾರಣಾ ಮಾತ್ರೆಯನ್ನು ಮುಂದಿನ ಎಪ್ರಿಲ್ 16ರಿಂದ 30ರವರೆಗೆ ಮನೆ ಮನೆಗೆ ಭೇಟಿ ನೀಡಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಇಂದು ಮಣಿಪಾಲದ ತಮ್ಮ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಬೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂತುಹುಳುಗಳು ದೇಹ ಪೌಷ್ಠಿಕಾಂಶಗಳನ್ನು ಬಳಸಲು ಅಡ್ಡಿ ಪಡಿಸುವುದರಿಂದ ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಹಿನ್ನಲೆಯಲ್ಲಿ ಜಂತುಹುಳುಗಳ ಬಾಧೆ ತಪ್ಪಿಸಲು ಸರಕಾರ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಆಲ್ಬೆಂಡರೆಲ್ ಮಾತ್ರೆಗಳನ್ನು ವಿತರಿಸಲು 1,36,013 ಗಂಡು ಮಕ್ಕಳು, 1,35,029 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2,71,042 ಮಕ್ಕಳನ್ನು ಗುರುತಿಸಲಾಗಿದೆ ಎಂದರು.
ಕಳೆದ ಸಾಲಿನಲ್ಲಿ ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಈ ಮಾತ್ರೆಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19ನಿಂದಾಗಿ ಶಾಲಾ- ಕಾಲೇಜುಗಳ ರಜಾದಿಂದಾಗಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೇರವಾಗಿ ಮನೆ ಮನೆಗೆ ತೆರಳಿ ಮಾತ್ರೆಗಳನ್ನು ಅವರ ಸಮ್ಮುಖದಲ್ಲಿ ನೀಡಲಿದ್ದಾರೆ ಎಂದರು.
ಒಂದರಿಂದ ಎರಡು ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ಶುದ್ಧ ನೀರಿನಲ್ಲಿ ಬೆರಿಸಿ ನೀಡಬೇಕು. ಎರಡರಿಂದ ಮೂರು ವರ್ಷದ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಪುಡಿ ಮಾಡಿ ಶುದ್ಧ ನೀರಿನಲ್ಲಿ ಬೆರೆಸಿ ನೀಡಬೇಕು. ಮೂರರಿಂದ -ಹತ್ತೊಂತ್ತು ವರ್ಷದ ಮಕ್ಕಳು ಒಂದು ಪೂರ್ಣ ಮಾತ್ರೆಯನ್ನು ಗಂಟಲಿನೊಳಗೆ ಸಿಕ್ಕಿ ಹಾಕಿಕೊಳ್ಳದಂತೆ ಅಗೆದು ನುಂಗುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಲಭ್ಯತೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾದ್ಯಂತ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸುವಾಗ ಕೋವಿಡ್ ಮಾರ್ಗಸೂಚಿಯನ್ನು ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು ಕೋವಿಡ್ ಸೋಂಕಿತರಿದ್ದರೆ 8 ವಾರಗಳ ನಂತರ ಈ ಮಾತ್ರೆಗಳನ್ನು ನೀಡಲಾಗುವುದು ಎಂದರು.
ಜಂತುಹುಳು ಬಾಧೆಯಿಂದ ದೂರವಿರಲು ಪ್ರತಿಯೊಬ್ಬರು ಪಾದರಕ್ಷೆ ಬಳಸಬೇಕು. ಶೌಚಾಲಯದ ಶುಚಿತ್ವ ಕಾಪಾಡಿಕೊಳ್ಳಬೇಕು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಜಂತುಹುಳ ನಿವಾರಣಾ ಕಾರ್ಯಕ್ರಮ ಅನುಷ್ಠಾನದ ಮೇಲ್ವಿಚಾರಣೆಯನ್ನು ತಾಲೂಕುಗಳಲ್ಲಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ ರಾಮ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಕುಂದಾಪುರ ಹಾಗೂ ಕಾರ್ಕಳ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.







