ಉಡುಪಿ: ಎಂಐಟಿಯಲ್ಲಿ ಮತ್ತೆ 184 ಮಂದಿ ಕೋವಿಡ್‌ಗೆ ಪಾಸಿಟಿವ್

ಉಡುಪಿ, ಮಾ.26: ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂದು 210 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇವರಲ್ಲಿ 184 ಮಂದಿ ಮಣಿಪಾಲ ಎಂಐಟಿ ಕ್ಯಾಂಪಸ್ ಒಳಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 210 ಮಂದಿ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 199 ಮಂದಿ, ಕುಂದಾಪುರ ತಾಲೂಕಿನ 9ಮಂದಿ ಹಾಗೂ ಕಾರ್ಕಳ ತಾಲೂಕಿನ ಇಬ್ಬರು ಸೇರಿದ್ದಾರೆ. ಉಡುಪಿ ತಾಲೂಕಿನಲ್ಲಿ ಎಂಐಟಿಯ ವಿದ್ಯಾರ್ಥಿಗಳೇ 184 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದು, ಈ ಮೂಲಕ ಇದುವರೆಗೆ ಪಾಸಿಟಿವ್ ಬಂದ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ 770ಕ್ಕೇರಿದೆ ಎಂದು ಡಾ.ಸೂಡ ತಿಳಿಸಿದರು.
ನಿನ್ನೆ ಮತ್ತು ಇಂದು ಜಿಲ್ಲೆಯಲ್ಲಿ ಒಟ್ಟು 4129 ಮಂದಿಯನ್ನು ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ 210 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಸೋಂಕು ಬಂದವರಲ್ಲಿ 208 ಮಂದಿಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದಿರುವುದರಿಂದ ಅವರನ್ನು ಹೋಮ್ ಐಸೋಲೇಷನ್‌ಗೆ ಸೇರಿಸಲಾಗಿದೆ. ಉಳಿದಿಬ್ಬರು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದರು.
ಇಂದು ಪಾಸಿಟಿವ್ ಬಂದವರಲ್ಲಿ 161 ಮಂದಿ ಪುರುಷರಾದರೆ, 49 ಮಂದಿ ಮಹಿಳೆಯರು. ಇಂದು 63 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 23,848ಕ್ಕೇರಿದೆ ಎಂದು ಡಾ.ಸೂಡ ವಿವರಿಸಿದರು.
ಗುರುವಾರ ಜಿಲ್ಲೆಯಲ್ಲಿ 4129 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 210 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 24,790 ಆಗಿದೆ. ಜಿಲ್ಲೆಯಲ್ಲಿ ಒಟ್ಟು 752 ಮಂದಿ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,09,042 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 190 ಆಗಿದೆ.







