ಭಾರತೀಯ ಶಿಕ್ಷಣದಲ್ಲಿ ಎಸ್ಸಿ,ಎಸ್ಟಿ ಮತ್ತು ಒಬಿಸಿಗಳ ಪ್ರಾತಿನಿಧ್ಯ ತೀರ ನಿರಾಶಾದಾಯಕ: ವರದಿ

ಸಾಂದರ್ಭಿಕ ಚಿತ್ರ
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಇನ್ನೆಷ್ಟು ಪೀಳಿಗೆಗಳಿಗೆ ಮುಂದುವರಿಯಲಿದೆ ಎಂದು ಮಾ.19ರಂದು ನ್ಯಾ.ಅಶೋಕ ಭೂಷಣ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಮರಾಠಾ ಮೀಸಲಾತಿಗೆ ಸಂಬಂಧಿಸಿದ ವಿಚಾರನೆ ಸಂದರ್ಭದಲ್ಲಿ ಪ್ರಶ್ನಿಸಿತ್ತು.
ಎರಡು ವಾರಗಳ ಹಿಂದಷ್ಟೇ,ಪರಿಶಿಷ್ಟ ಜಾತಿಗೆ ಸೇರಿದ ನನ್ನ ಬ್ಯಾಚ್ಮೇಟ್ ಓರ್ವ ವಿವಿಧ ಮಟ್ಟಗಳಲ್ಲಿ ತನ್ನ ವಿರುದ್ಧದ ತಾರತಮ್ಯಗಳಿಂದ ಬೇಸತ್ತು ಗಾಂಧಿನಗರದ ಐಐಟಿಯಿಂದ ಹೊರನಡೆದಿದ್ದಾನೆ. ಭೇದಭಾವದಿಂದ ಕೂಡಿದ್ದ ಅಲ್ಲಿಯ ವ್ಯವಸ್ಥೆ ಆತ ಕಾಲೇಜನ್ನು ತೊರೆಯುವಂತೆ ಮಾಡಿತ್ತು ಮತ್ತು ಆತನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮವನ್ನುಂಟು ಮಾಡಿದೆ. ಈ ಘಟನೆ ನನ್ನಲ್ಲಿ ಕ್ರೋಧ,ಖಿನ್ನತೆ ಮತ್ತು ಆತಂಕವನ್ನು ಹುಟ್ಟುಹಾಕಿದೆ.
ಇದು ಐಐಟಿ ಗಾಂಧಿನಗರಕ್ಕೆ ಮಾತ್ರ ಸೀಮಿತವಲ್ಲ,ಭಾರತದ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿಯೂ ಇಂತಹ ತಾರತಮ್ಯಗಳು ತಾನೇತಾನಾಗಿ ಮೆರೆಯುತ್ತಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿಯ ಎಸ್ಸಿ,ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳು ಪ್ರತಿದಿನವೂ ಎಂಬಂತೆ ವಿವಿಧ ಮಟ್ಟಗಳಲ್ಲಿ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ದೇಶಾದ್ಯಂತ ಶೈಕ್ಷಣಿಕ,ರಾಜಕೀಯ,ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಮೇಲ್ಜಾತಿಗಳಿಗೆ ಸೇರಿದವರ ಪ್ರಾಬಲ್ಯವಿದೆ. ದೇಶದ ಹೆಚ್ಚಿನ ವಲಯಗಳು ಮತ್ತು ಸಂಪನ್ಮೂಲಗಳ ಮೇಲೆ ಮೇಲ್ಜಾತಿಗಳ ನಿಯಂತ್ರಣದ ಬಳಿಕವೂ ಮೀಸಲಾತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಹೇಳಿಕೆಯು ಸಾಕಷ್ಟು ತಮಾಷೆ ಮತ್ತು ವ್ಯಂಗ್ಯದಿಂದ ಕೂಡಿದೆ.
ದಿಲ್ಲಿ ವಿವಿಯ ಪದವಿ ವಿದ್ಯಾರ್ಥಿಯಿಂದ ಹಿಡಿದು ಐಐಟಿ ಗಾಂಧಿನಗರದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವವರೆಗೆ ಪಯಣದಲ್ಲಿ ನನ್ನ ಅನುಭವವು ಈ ಶಿಕ್ಷಣ ಸಂಸ್ಥೆಗಳು ಜಾತಿವಾದಿಯಾಗಿವೆ,ಗಣ್ಯರ ಪರವಾಗಿವೆ ಮತ್ತು ಮೇಲ್ಜಾತಿಗಳ ನಿಯಂತ್ರಣದಲ್ಲಿವೆ ಎನ್ನುವುದನ್ನು ನನಗೆ ಕಲಿಸಿದೆ. ಈ ಸಂಸ್ಥೆಗಳು ಬಿಹಾರದಲ್ಲಿಯ ನನ್ನ ಗ್ರಾಮಕ್ಕಿಂತ ಹೆಚ್ಚು ಜಾತಿವಾದಿಯಾಗಿವೆ.
ಬೋಧಕ ವೃಂದಕ್ಕೆ ಒಬಿಸಿ ಮೀಸಲಾತಿ ಜಾರಿಗೊಂಡು 12 ವರ್ಷಗಳಾದ ಬಳಿಕವೂ ದೇಶದಲ್ಲಿಯ 40 ಕೇಂದ್ರೀಯ ವಿವಿಗಳ ಪೈಕಿ ಹೆಚ್ಚಿನವುಗಳಲ್ಲಿ ಈ ಗುಂಪಿಗೆ ಸೇರಿದ ಒಬ್ಬನೇ ಒಬ್ಬ ಪ್ರೊಫೆಸರ್ ಇಲ್ಲ.
ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ನಿಷಾಂಕ್ ಅವರು ರಾಜ್ಯಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳಂತೆ 2016ರಿಂದ 2020ರವರೆಗಿನ ಅವಧಿಯಲ್ಲಿ ಬೆಂಗಳೂರಿನ ಐಐಎಸ್ಸಿಯಲ್ಲಿ ಪಿಎಚ್ಡಿ ಪ್ರೋಗ್ರಾಮ್ಗೆ ಪ್ರವೇಶ ಪಡೆದವರಲ್ಲಿ ಕೇವಲ ಶೇ.2.1 ಅಭ್ಯರ್ಥಿಗಳು ಎಸ್ಟಿ ವರ್ಗಕ್ಕೆ ಸೇರಿದ್ದರೆ,ಶೇ.9ರಷ್ಟು ಎಸ್ಸಿ ಮತ್ತು ಶೇ.8ರಷ್ಟು ಒಬಿಸಿ ಗುಂಪಿಗೆ ಸೇರಿದವರಾಗಿದ್ದಾರೆ. ಇಂಟಿಗ್ರೇಟೆಡ್ ಪಿಎಚ್ಡಿ ಕೋರ್ಸ್ಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ,ಅಲ್ಲಿ ಶೇ.1.2 ಎಸ್ಟಿ,ಶೇ.9 ಎಸ್ಸಿ ಮತ್ತು ಶೇ.5ರಷ್ಟು ಒಬಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಾಗಿದೆ.
17 ಇಂಡಿಯನ್ ಇನ್ಸ್ಟಿಟ್ಯೂಟ್ಸ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (ಐಐಐಟಿ)ಗಳಲ್ಲಿ ಒಟ್ಟು ಪಿಎಚ್ಡಿ ಅಭ್ಯರ್ಥಿಗಳ ಪೈಕಿ ಶೇ.1.7 ಎಸ್ಟಿ,ಶೇ.9 ಎಸ್ಸಿ ಮತ್ತು ಶೇ.27.4 ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಎನ್ಐಟಿಗಳು ಮತ್ತು ಐಐಎಸ್ಇಆರ್ಗಳಂತಹ ಇತರ ಶಿಕ್ಷಣ ಸಂಸ್ಥೆಗಳಲ್ಲಿಯೂ ಸ್ಥಿತಿ ಇದೇ ರೀತಿಯಿದೆ ಅಥವಾ ಇದಕ್ಕಿಂತ ಹೆಚ್ಚು ಹದಗೆಟ್ಟಿದೆ.
ಪ್ರವೇಶವನ್ನು ಪಡೆದ ಬಳಿಕವೂ ತಮ್ಮ ಕೋರ್ಸ್ಗಳನ್ನು ಮುಂದುವರಿಸುವುದು ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಪ್ರಮುಖ ಸವಾಲು ಆಗಿದೆ. ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ತೊರೆಯುತ್ತಿರುವವರಲ್ಲಿ ಹೆಚ್ಚಿನವರು ಎಸ್ಸಿ,ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ.
ಐಐಟಿಗಳನ್ನು ತೊರೆಯುತ್ತಿರುವವರ ಪೈಕಿ ಶೆ.48ರಷ್ಟು ಮತ್ತು ಐಐಎಂಗಳನ್ನು ತೊರೆಯುತ್ತಿರುವವರ ಪೈಕಿ ಶೇ.62.6ಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಸಿ,ಎಸ್ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ನಿಷಾಂಕ್ 2019ರಲ್ಲಿ ಸಂಸತ್ತಿನಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದರು.
ಈ ಶಿಕ್ಷಣ ಸಂಸ್ಥೆಗಳಲ್ಲಿಯ ಬೋಧಕ ವೃಂದಗಳಲ್ಲಿ ಮೀಸಲು ವರ್ಗಗಳಿಗೆ ಪ್ರಾತಿನಿಧ್ಯ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಶಿಕ್ಷಣ ಸಚಿವಾಲಯವು 2019ರಲ್ಲಿ ಲೋಕಸಭೆಯಲ್ಲಿ ಒದಗಿಸಿದ್ದ ಅಂಕಿಅಂಶಗಳಂತೆ 23 ಐಐಟಿಗಳ 6,043 ಬೋಧಕ ಸಿಬ್ಬಂದಿಗಳಲ್ಲಿ 149 ಜನರು ಎಸ್ಸಿ,21 ಜನರು ಎಸ್ಟಿಗಳಾಗಿದ್ದು,ಇವರ ಒಟ್ಟೂ ಸಂಖ್ಯೆ ಶೇ.3ಕ್ಕೂ ಕಡಿಮೆಯಿತ್ತು.
ಹೆಚ್ಚಿನ ಐಐಟಿಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಒಬ್ಬರೇ ಒಬ್ಬ ಪ್ರೊಫೆಸರ್ ಇಲ್ಲ.
ಶೈಕ್ಷಣಿಕ ವ್ಯವಸ್ಥೆಯ ಮೇಲೆ ಮೇಲ್ಜಾತಿಗಳ ಹಿಡಿತ ಎಷ್ಟೊಂದು ಬಲವಾಗಿದೆಯೆಂದರೆ ನೇಮಕಾತಿಯನ್ನು ಪಡೆಯುವುದು ಮೀಸಲು ವರ್ಗದವರಿಗೆ ತುಂಬ ಕಠಿಣವಾಗಿದೆ.
ಪ್ರತಿಷ್ಠಿತ ಮಾಧ್ಯಮಗಳು ಮತ್ತು ದೊಡ್ಡ ಪ್ರಕಾಶನ ಸಂಸ್ಥೆಗಳ ಸಂಪಾದಕರು ಮತ್ತು ಸರಣಿ ಸಂಪಾದಕರು,ಪ್ರೊಫೆಸರ್ಗಳು,ಕುಲಪತಿಗಳು,ನಿರ್ದೇಶಕರು,ಡೀನ್ಗಳು ಮತ್ತು ಬೋಧಕೇತರ ಸಿಬ್ಬಂದಿ ಹೀಗೆ ಜಾತಿ ವ್ಯವಸ್ಥೆಯ ಗೇಟ್ಕೀಪರ್ಗಳು ಎಸ್ಸಿ-ಎಸ್ಟಿಗಳು ಮತ್ತು ಒಬಿಸಿಗಳ ಏಳಿಗೆಯನ್ನು ತಡೆಯಲು ಎಲ್ಲ ಕಡೆಗಳಲ್ಲಿಯೂ ಇದ್ದಾರೆ.
ಈ ಶಿಕ್ಷಣ ಸಂಸ್ಥೆಗಳಲ್ಲಿನ ಬಹಿಷ್ಕಾರ ನೀತಿಗಳು ಮೀಸಲು ವರ್ಗಗಳ ವಿದ್ಯಾರ್ಥಿಗಳು ಅರ್ಧದಲಿಯೇ ವ್ಯಾಸಂಗವನ್ನು ತೊರೆಯಲು ಕಾರಣಗಳಾಗಿವೆ. ತಾರತಮ್ಯವು ಎಷ್ಟೊಂದು ವ್ಯವಸ್ಥಿತ ಮತ್ತು ಸಾಂಸ್ಥಿಕವಾಗಿದೆ ಎಂದರೆ ಮೀಸಲು ವರ್ಗಗಳ ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮತ್ತು ಶಿಕ್ಷಣವನ್ನು ಮುಂದುವರಿಸುವುದು ಕಠಿಣವಾಗಿಬಿಟ್ಟಿದೆ.
ಮೇಲ್ಜಾತಿಗಳ ನೆಟ್ವರ್ಕ್ಗಳು ಭಾರತದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಿವೆ ಎನ್ನುವುದನ್ನು ತನ್ನ ಲೇಖನವೊಂದರಲ್ಲಿ ಬೆಟ್ಟು ಮಾಡಿರುವ ಜೆಎನ್ಯು ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್ ಸೆಂಟರ್ ಫಾರ್ ದಿ ಸ್ಟಡಿ ಆಫ್ ಸೋಷಿಯಲ್ ಸಿಸ್ಟಮ್ನಲ್ಲಿ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿರುವ ವಿವೇಕ ಕುಮಾರ, ವಿವಿಗಳು, ಶಿಕ್ಞಣ ಸಂಸ್ಥೆಗಳು ಮತ್ತು ಕಾಲೇಜುಗಳಲ್ಲಿ, ಪುಸ್ತಕಗಳ ಲೇಖಕರಾಗಿ ಜ್ಞಾನದ ಉತ್ಪಾದಕರಲ್ಲಿ ಮೇಲ್ಜಾತಿಗಳ ಪ್ರಾಬಲ್ಯವನ್ನು ವಿಶ್ಲೇಷಿಸಿದ್ದಾರೆ. ಚರಿತ್ರೆ, ಮಾನವ ಶಾಸ್ತ್ರ, ಸಾಹಿತ್ಯ ಮತ್ತು ಇನ್ನೂ ಹಲವಾರು ವಿಭಾಗಗಳಲ್ಲಿಯೂ ಇಂತಹುದೇ ವಿಶ್ಲೇಷಣೆಯನ್ನು ಮಾಡಬಹುದಾಗಿದೆ.







