ಬಡವರಿಗೆ ಲಸಿಕೆ ತಲುಪಿಸಲು ಕ್ರಮ ಕೈಗೊಳ್ಳಿ: ಹೈಕೋರ್ಟ್ ಸೂಚನೆ

ಬೆಂಗಳೂರು, ಮಾ.26: ಕರ್ನಾಟಕ ವ್ಯಾಪ್ತಿಯಲ್ಲಿ ದಿನನಿತ್ಯ ಕೊರೋನ ಸೋಂಕಿನ ಪ್ರಕರಣಗಳು ಗಣನೀಯ ಏರಿಕೆ ಆಗುತ್ತಿರುವ ಹಿನ್ನೆಲೆ ಕೊಳಗೇರಿಗಳು ಮತ್ತು ಬಡವರು ವಾಸಿಸುವ ಪ್ರದೇಶಗಳಿಗೆ ಸೂಕ್ತ ರೀತಿಯಲ್ಲಿ ಲಸಿಕೆ ತಲುಪಿಸಲು ಹೆಚ್ಚಿನ ಗಮನ ನೀಡುವ ಮೂಲಕ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ರವಾನಿಸಿದೆ.
ಕಟ್ಟಡ ಕಾರ್ಮಿಕರು, ಹೆಚ್ಚಿನ ಸಂಖ್ಯೆಯ ಬಡವರು, ಕೊಳಗೇರಿಗಳಲ್ಲಿ ವಾಸಿಸುವ ಸ್ಥಳಗಳಿಗೂ ಲಸಿಕೆ ತಲುಪಿಸಬೇಕು. ಈ ಸಮುದಾಯದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಎಚ್ಚರಿಕೆ ವಹಿಸಬೇಕೆಂದು ಪೀಠವೂ ತಿಳಿಸಿತು.
ಅಲ್ಲದೆ, ಲಸಿಕೆ ಶ್ರೀಮಂತರಿಗೆ ಲಭ್ಯವಾದರೆ ಸಾಲದು. ಬಡವರಿಗೆ ಅದರಲ್ಲೂ ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ತಲುಪಿಸಬೇಕು. ಅವರಿಗೆ ಲಸಿಕೆ ದೊರಕದಿದ್ದರೆ ಅದು ಸಂವಿಧಾನದ ವಿಧಿ 21ರಡಿ ಲಭ್ಯವಿರುವ ಆರೋಗ್ಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಕಾರ್ಮಿಕರು ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗುತ್ತಿದ್ದಾರೆ. ಆ ವೇಳೆ ಸೋಂಕು ಇದ್ದರೆ, ಅದು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತದೆ ಎಂದು ಪೀಠವೂ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾ.31ಕ್ಕೆ ವಿವರವಾದ ವರದಿ ಸಲ್ಲಿಸಬೇಕೆಂದು ಸರಕಾರಕ್ಕೆ ಸೂಚಿಸಿತು.







