ಉಡುಪಿ: ಹಿರಿಯ ರಂಗಕರ್ಮಿಗಳಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರದಾನ

ಉಡುಪಿ, ಮಾ.26: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲ ಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯ ಜಂಟಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಲಬಾರ್ ವಿಶ್ವರಂಗ ಪುರಸ್ಕಾರ ಸಮಾರಂಭವನ್ನು ಮಲಬಾರ್ ಗೋಲ್ಡ್ ಉಡುಪಿಯ ಶಾಖೆಯಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಹಿರಿಯ ಕನ್ನಡದ ರಂಗಕರ್ಮಿಗಳಾದ ಎನ್.ರಾಜಗೋಪಾಲ್ ಬಲ್ಲಾಳ್ ಉಡುಪಿ, ಲಕ್ಷ್ಮಣ್ ಕುಮಾರ್ ಮಲ್ಲೂರು ಮಂಗಳೂರು, ಶಶಿಕಲಾ ಜೋಶಿ ಧಾರವಾಡ, ಗಂಗಾಧರ ಕಿದಿಯೂರು ಉಡುಪಿ ಅವರಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕ ಬಿ. ಅನಂತಕೃಷ್ಣ, ನಟ ರವೀಂದ್ರ ಕೆ.ಶೆಟ್ಟಿ ಕಡೆಕಾರು ಮುಖ್ಯ ಅತಿಥಿಗಳಾಗಿದ್ದರು. ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಪ್ರತಿಷ್ಠಾನದ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು.
ಪುರಸ್ಕಾರ ಸಮಿತಿ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾವನ ಕೆರೆಮಠ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಗಿರ್ಮಿಟ್ ಚಲನಚಿತ್ರದ ನಾಯಕ ನಟ ಆಶ್ಲೇಷ ರಾಜ್ ಇವರ ಏಕವ್ಯಕ್ತಿ ರಂಗಪ್ರಯೋಗ ’ರಾಷ್ಟ್ರವೀರ ಎಚ್ಚಮ ನಾಯಕ’ ಪ್ರದರ್ಶನಗೊಂಡಿತು.







