ಶಬೇ ಬರಾಅತ್: ಮಾರ್ಗಸೂಚಿ ಪಾಲಿಸಲು ಸಗೀರ್ ಅಹ್ಮದ್ ರಶಾದಿ ಮನವಿ
ಬೆಂಗಳೂರು, ಮಾ.26: ಶಬೇ ಬರಾಅತ್ ಅನ್ನು ಮಾ.28ರಂದು ರವಿವಾರ ಆಚರಿಸಲಾಗುತ್ತಿದ್ದು, ಮುಸ್ಲಿಮ್ ಸಮುದಾಯದವರು ಅಗತ್ಯವಾಗಿ ಇಮಾರತೆ ಶರೀಅ ನೀಡುತ್ತಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ ಮನವಿ ಮಾಡಿದ್ದಾರೆ.
ಶಬೇ ಬರಾಅತ್ ದಿನದಂದು ಮಸೀದಿಗಳಲ್ಲಿ ನಮಾಝ್‍ಗಳನ್ನು ನಿರ್ವಹಿಸಿ. ಯಾವುದೆ ಕಾರಣಕ್ಕೂ ಹೊರಗಡೆ ಪೆಂಡಾಲ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಂಡು ನಮಾಝ್ ನಿರ್ವಹಿಸಬಾರದು. ಮಸೀದಿಗಳಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ವಿಶೇಷ ಗಮನ ಹರಿಸಿ. ಈ ಬಗ್ಗೆ ಈಗಾಗಲೆ ರಾಜ್ಯ ಸರಕಾರದಿಂದ ಸುತ್ತೊಲೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಸೀದಿಗಳಲ್ಲಿ ನಮಾಝ್ ನಿರ್ವಹಿಸಿದ ಬಳಿಕ ನಿಮ್ಮ ನಿಮ್ಮ ಮನೆಗಳಿಗೆ ತೆರಳಿ. ಯಾವುದೆ ಕಾರಣಕ್ಕೂ ರಾತ್ರಿ ಹೊತ್ತು ಹೊರಗಡೆ ತಿರುಗಾಡುವುದಾಗಲಿ, ಹೊಟೇಲ್‍ಗಳಲ್ಲಿ ಸೇರುವುದಾಗಲಿ ಮಾಡಬೇಡಿ. ವಿಶೇಷವಾಗಿ ಯುವಕರು ತಮ್ಮ ದ್ವಿಚಕ್ರ ವಾಹನಗಳಲ್ಲಿ ವ್ಲೀಲಿಂಗ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಸಗೀರ್ ಅಹ್ಮದ್ ರಶಾದಿ ಮನವಿ ಮಾಡಿದ್ದಾರೆ.
ಕಾನೂನಿನ ಉಲ್ಲಂಘನೆ ಮಾಡುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಸಮುದಾಯ ಹಾಗೂ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆ ಉಳಿಯುವಂತೆ ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸಿರಿ ಎಂದು ಅಮೀರೆ ಶರೀಅತ್ ಕೋರಿದ್ದಾರೆ.







