ಗ್ರಾಪಂ ಚುನಾವಣೆ: ಮದ್ಯ ಮಾರಾಟ ನಿಷೇಧ
ಮಂಗಳೂರು, ಮಾ.26: ಗ್ರಾಪಂಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ/ ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ, ಮಾರಾಟ ಕೇಂದ್ರಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು, ಆರಂಬೋಡಿ, ತಣ್ಣೀರುಪಂತ ಗ್ರಾಪಂಗಳಲ್ಲಿ ಹಾಗೂ ಬಂಟ್ವಾಳ ತಾಲೂಕಿನ ಮಾಣಿಲ, ಪುದು ಗ್ರಾಪಂಗಳಲ್ಲಿ ಮತದಾನದ ಸಲುವಾಗಿ ಮಾ.27ರಂದು ಸಂಜೆ 5ರಿಂದ 29ರಂದು ಸಂಜೆ 5 ಗಂಟೆಯವರೆಗೆ ಮದ್ಯ ಮರಾಟಕ್ಕೆ ನಿಷೇಧವಿದೆ.
ಮತ ಎಣಿಕೆ ಸಲುವಾಗಿ ಮಾ.31ರ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ಮತ ಎಣಿಕೆ ನಡೆಯುವ ಕೇಂದ್ರಗಳ 3 ಕಿ.ಮೀ. ವ್ಯಾಪ್ತಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಈ ದಿನಗಳಲ್ಲಿ ಎಲ್ಲ ವಿಧದ ಮದ್ಯದಂಗಡಿ ಮುಚ್ಚಲು ಆದೇಶಿಸಿದ್ದಾರೆ.
ಸೂಚಿತ ಅವಧಿಯಲ್ಲಿ ಯಾವುದೇ ಹೊಟೇಲುಗಳಲ್ಲಾಗಲೀ, ನಾನ್ ಪ್ರೊಪೈಟರ್‌ಗಳಲ್ಲಿ, ಸ್ಟಾರ್ ಹೊಟೇಲ್‌ಗಳಲ್ಲಾಗಲೀ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ಕೂಡ ನಿಷೇಧಿಸಿ ಆದೇಶಿಸಲಾಗಿದೆ.





