ಸುಭದ್ರ ರಾಷ್ಟ್ರ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಯುವ ಜನತೆಯಿಂದ ಮಾತ್ರ ಸಾಧ್ಯ: ಸಲೀಂ ಅಹ್ಮದ್

ಸುಳ್ಯ: ಕಾಂಗ್ರೆಸ್ ಪಕ್ಷ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಯುವಕರಿಂದ ಮಾತ್ರ ಸುಭದ್ರ ರಾಷ್ಟ್ರ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಯುವಕರ ನಡೆ ಗ್ರಾಮದ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ಕಾಂಗ್ರೆಸ್‍ಗೆ ದೊಡ್ಡ ಇತಿಹಾಸ ಇದೆ. ನೂರಾರು ರಾಷ್ಟ್ರ ನಾಯಕರನ್ನು ಬೆಳೆಸಿದ ಕೀರ್ತಿ ಯುವ ಕಾಂಗ್ರೆಸ್ ಗೆ ಇದೆ. ಮನೆ ಮನೆಗೆ ಕಾಂಗ್ರೆಸ್ ಪಕ್ಷದ ವಿಚಾರಧಾರೆ ಮತ್ತು ಸಿದ್ಧಾಂತವನ್ನು ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಕೇಂದ್ರ ಹಾಗು ರಾಜ್ಯ ಸರಕಾರದ ಬಗ್ಗೆ ಜನರಿಗೆ ಭ್ರಮ ನಿರಸನ ಉಂಟಾಗಿದೆ. ಬಿಜೆಪಿ ಸರಕಾರ ನೀಡಿದ ಯಾವುದೇ ಆಶ್ವಾಸನೆಗಳನ್ನೂ ಈಡೇರಿಸುತ್ತಿಲ್ಲ.ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ಕೇಂದ್ರದ ಬಿಜೆಪಿ ಸರಕಾರ ಆಶ್ವಾಸನೆ ನೀಡಿತ್ತು. ಏಳು ವರ್ಷದಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ ಎರಡು ಲಕ್ಷ ಉದ್ಯೋಗ ಕೂಡ ಸೃಷ್ಠಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ರಾಜ್ಯ ಮತ್ತು ಕೇಂದ್ರ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಮಾತನಾಡಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್,
ಕೆಪಿಸಿಸಿ ಉಸ್ತುವಾರಿ ಜಿ.ಕೃಷ್ಣಪ್ಪ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಆಳ್ವ, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಸವಾದ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್,ಎಸ್.ಸಂಶುದ್ದೀನ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಎನ್‍ಎಸ್‍ಯುಐ ತಾಲೂಕು ಅಧ್ಯಕ್ಷ ಕೀರ್ತನ್ ಕೊಡೆಪಾಲ ಉಪಸ್ಥಿತರಿದ್ದರು. ಕಾಂಗ್ರೆಸ್ ಸುಳ್ಯ ನಗರಾಧ್ಯಕ್ಷ ಶಶಿಧರ ಎನ್.ಜೆ.ಸ್ವಾಗತಿಸಿದರು. ತಾಲೂಕು ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.







