ಪುಣೆ: ಮೂರು ವಿವಿಧ ಸ್ಥಳಗಳಲ್ಲಿ ಅಗ್ನಿಅನಾಹುತ, ಓರ್ವ ಮೃತ್ಯು
ಫ್ಯಾಶನ್ ಸ್ಟ್ರೀಟ್ ನಲ್ಲಿರುವ 400 ಮಳಿಗೆಗಳು ಬೆಂಕಿಗಾಹುತಿ

ಪುಣೆ: ಪುಣೆ ನಗರದಲ್ಲಿ ಶುಕ್ರವಾರ ಮೂರು ಪ್ರತ್ಯೇಕ ಅಗ್ನಿ ಆಕಸ್ಮಿಕ ಘಟನೆಯಲ್ಲಿ 28ರ ವಯಸ್ಸಿನ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಪುಣೆ ಕ್ಯಾಂಪ್ ಪ್ರದೇಶದ ಫ್ಯಾಶನ್ ಸ್ಟ್ರೀಟ್ ನಲ್ಲೂ ಶುಕ್ರವಾರ ರಾತ್ರ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ಇದರಲ್ಲಿದ್ದ 400 ಮಳಿಗೆ ಗಳು ಸಂಪೂರ್ಣ ಸುಟ್ಟುಹೋಗಿವೆ. ಬೆಂಕಿಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ ಎಂದು ಫೈಯರ್ ಬ್ರಿಗೇಡ್ ಕಂಟ್ರೋಲ್ ರೂಂನ ಅಧಿಕಾರಿಗಳು ತಿಳಿಸಿದ್ದಾರೆ.
ಫ್ಯಾಶನ್ ಸ್ಟ್ರೀಟ್ ನಲ್ಲಿ ಬೆಂಕಿಹೊತ್ತಿಕೊಂಡ ಸುದ್ದಿಯು ಪುಣೆ ಅಗ್ನಿ ಶಾಮಕ ದಳಕ್ಕೆ ರಾತ್ರಿ 11ರ ಸುಮಾರಿಗೆ ಗೊತ್ತಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸೆಂಟ್ರಲ್ ಫೈಯರ್ ಬ್ರಿಗೇಡ್ ಹಾಗೂ ಕಂಟೋನ್ಮೆಂಟ್ ಫೈಯರ್ ಬ್ರಿಗೇಡ್ ಗಳು ರಾತ್ರಿ 1:30ರ ಸುಮಾರಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ.
ಫ್ಯಾಶನ್ ಸ್ಟ್ರೀಟ್ ಮುಖ್ಯವಾಗಿ ಫ್ಯಾಶನ್ ಉಡುಪುಗಳು ಹಾಗೂ ಇತರ ಟ್ರೆಂಡಿ ವಸ್ತುಗಳನ್ನು ಮಾರಾಟ ಮಾಡುವ ಸ್ಟಾಲ್ ಗಳಿಗೆ ಹೆಸರುವಾಸಿಯಾಗಿದೆ.
ಮಹಾತ್ಮ ಫುಲೆ ಗಂಜ್ ಪೇಟೆಯಲ್ಲಿ ಸ್ಕ್ರಾಪ್ ಸೆಂಟರ್ ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಉತ್ತರಪ್ರದೇಶದ ಕಾರ್ಮಿಕ ಮೃತಪಟ್ಟಿದ್ದಾನೆ. ಮೃತ ಕಾರ್ಮಿಕನನ್ನು ಶಿವಕಾಂತ್ ಎಂದು ಗುರುತಿಸಲಾಗಿದೆ.
ಸುಟ್ಟ ಸ್ಥಿತಿಯಲ್ಲಿ ಕಂಡಬಂದಿದ್ದ ಶಿವಕಾಂತ್ ನನ್ನು ಸಸ್ಸೋನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಆತ ಮೃತಪಟ್ಟಿದ್ದಾನೆ. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಖರಾಡಿ ಪ್ರದೇಶದ ವಾಣಿಜ್ಯ ಕಟ್ಟಡದಲ್ಲಿ ಬೆಂಕಿಹೊತ್ತಿಕೊಂಡಿದ್ದು, ಇಲ್ಲಿ 10 ಅಂಗಡಿಗಳಿದ್ದವು. ಘಟನೆಯಲ್ಲಿ ಹಲವು ಅಂಗಡಿ, ಕಚೇರಿಗಳಿಗೆ ಹಾನಿಯಾಗಿದೆ. ಸಾವು-ನೋವಿನ ವರದಿಯಾಗಿಲ್ಲ.







