ದಿಢೀರನೇ ಹುದ್ದೆಯಿಂದ ಕೆಳಗಿಳಿಸಿದ ಕ್ರಮದಿಂದ ತೀವ್ರ ನೋವಾಗಿದೆ ಎಂದ ಉತ್ತರಾಖಂಡ ಮಾಜಿ ಸಿಎಂ ರಾವತ್

ಡೆಹ್ರಾಡೂನ್, ಮಾ.27: ಪಕ್ಷದ ವರಿಷ್ಠರು ತಮ್ಮನ್ನು ದಿಢೀರನೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಕ್ರಮದಿಂದ ತೀವ್ರ ನೋವಾಗಿದೆ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಅಪಾರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ಮಹಾಭಾರತದ ಅಭಿಮನ್ಯುವಿಗೆ ಹೋಲಿಸಿಕೊಂಡಿದ್ದಾರೆ.
"ಅಭಿಮನ್ಯುವಿನ ಸಾವಿಗೆ ದ್ರೌಪದಿ ದುಃಖಿಸಲಿಲ್ಲ. ಏಕೆಂದರೆ ಕೌರವರ ವಿಶ್ವಾಸಘಾತುಕತನದಿಂದ ಅಭಿಮನ್ಯು ಹತ್ಯೆಯಾದ. ದುಃಖಿಸುವ ಬದಲು ಆಕೆ ಸೇಡು ತೀರಿಸಿಕೊಳ್ಳುವಂತೆ ಪಾಂಡವರನ್ನು ಪ್ರಚೋದಿಸಿದಳು" ಎಂದು ರಾವತ್ ನುಡಿದರು.
ವಿಶ್ವಾಸಘಾತುಕತನ ತೋರಿದವರನ್ನು ನೆನೆದು ದುಃಖಿಸುವುದಲ್ಲ; ಪ್ರತಿದಾಳಿ ನಡೆಸಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದರು.
ಸಿಎಂ ಹುದ್ದೆಯ ಅಧಿಕಾರಾವಧಿ ನಾಲ್ಕು ವರ್ಷ ಪೂರ್ಣಗೊಳ್ಳಲು ಒಂಭತ್ತು ದಿನ ಬಾಕಿ ಇದ್ದಾಗ ರಾವತ್ ಅವರ ರಾಜೀನಾಮೆಗೆ ಪಕ್ಷದ ವರಿಷ್ಠರು ಸೂಚಿಸಿದ್ದರು. ಮಹಿಳೆಯರ ಮತ್ತು ಯುವಕರ ಸಬಲೀಕರಣಕ್ಕೆ ನಾನು ಪ್ರಯತ್ನಿಸಿದ್ದು, ಬಹುಶಃ ಕೆಲ ಜನರಿಗೆ ಪಥ್ಯವಾಗಲಿಲ್ಲ ಎಂದು ಹೇಳಿದರು.
"ರಾಜಕೀಯದ ಕತ್ತಲ ಸುರಂಗದಲ್ಲಿ ಕಳಂಕರಹಿತರಾಗಿದ್ದಕ್ಕೆ ನನಗೆ ಸಂತಸವಿದೆ. ಜನರ ಕಣ್ಣಿಗೆ ಕಣ್ಣಿಟ್ಟು ನೇರವಾಗಿ ನೋಡಲು ಸಾಧ್ಯವಾಗದ ಯಾವ ಕೆಲಸವನ್ನೂ ಮಾಡಿಲ್ಲ" ಎಂದು ಸಮರ್ಥಿಸಿಕೊಂಡರು.
ಮಿಲನ್ ವೆಡ್ಡಿಂಗ್‌ಪಾಯಿಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ರಾವತ್ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.







