ಗುಬ್ಬಿ: ಮಗನಿಂದಲೇ ತಂದೆಯ ಹತ್ಯೆ: ಆರೋಪಿಯ ಬಂಧನ

ತುಮಕೂರು, ಮಾ.27: ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಅಪ್ಪ ಮಕ್ಕಳ ಆಸ್ತಿ ವಿವಾದದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶುಕ್ರವಾರ ಸಂಜೆ ಗುಬ್ಬಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಗುಬ್ಬಿ ನಿವಾಸಿ ವೆಂಕಟರಾಮಯ್ಯ(50) ಎಂದು ಗುರುತಿಸಲಾಗಿದೆ. ಅವರ ಪುತ್ರ ಸೂರ್ಯಪ್ರಕಾಶ್(22) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ವೆಂಕಟರಾಮಯ್ಯ ಅವರು ಪತ್ನಿ, ಮಕ್ಕಳಿಂದ ದೂರವಾಗಿ ಗುಬ್ಬಿಯ ಸಿಡಿಲು ಬಸವೇಶ್ವರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಇಬ್ಬರು ಮಕ್ಕಳು ತುಮಕೂರಿನಲ್ಲಿ ವಾಸವಾಗಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಅಪ್ಪ, ಮಕ್ಕಳ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆಯುತ್ತಿತ್ತೆನ್ನಲಾಗಿದೆ. ತಮಗೆ ಬರ ಬೇಕಾದ ಆಸ್ತಿಯನ್ನು ಪಾಲು ಮಾಡಿ ನೀಡುವಂತೆ ಇವರು ವೆಂಕಟರಾಮಯ್ಯರನ್ನು ಒತ್ತಾಯಿಸಿ ಪದೇ ಪದೇ ಜಗಳ ಮಾಡುತ್ತಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಗುರುವಾರ ಸಂಜೆ 5:30ರ ಸುಮಾರಿಗೆ ವೆಂಕಟರಾಮಯ್ಯ ವಾಸವಿದ್ದ ಮನೆ ಬಳಿಗೆ ತೆರಳಿದ್ದನ್ನನೆನ್ನಲಾದ ಅವರ ಪುತ್ರ ಸೂರ್ಯಪ್ರಕಾಶ್ ಮಚ್ಚಿನಿಂದ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದಾನೆನ್ನಲಾಗಿದೆ. ಈ ವೇಳೆ ತಡೆಯಲೆತ್ನಿಸಿದ ಇಬ್ಬರ ಮೇಲೂ ಆತ ದಾಳಿ ನಡೆಸಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸೂರ್ಯಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.





