"ತನ್ನ ಪ್ರಜೆಗಳಿಗೆ ನೀಡಿದ ಕೋವಿಡ್ ಲಸಿಕೆಗಿಂತಲೂ ಅಧಿಕ ಸಂಖ್ಯೆಯ ಲಸಿಕೆಯನ್ನು ಭಾರತ ಜಗತ್ತಿಗೆ ಪೂರೈಸಿದೆ"
ವಿಶ್ವ ಸಂಸ್ಥೆಯಲ್ಲಿ ಭಾರತ

ಹೊಸದಿಲ್ಲಿ: ಭಾರತವು ತನ್ನ ದೇಶದ ನಾಗರಿಕರಿಗೆ ನೀಡಿದ ಲಸಿಕೆಗಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ವಿದೇಶಗಳಿಗೆ ಪೂರೈಸಿದೆ ಎಂದು ಭಾರತ ವಿಶ್ವ ಸಂಸ್ಥೆಯ ಸಾಮಾನ್ಯ ಶೃಂಗಸಭೆಗೆ ಮಾಹಿತಿ ನೀಡಿದೆಯಲ್ಲದೆ ಲಸಿಕೆ ಪೂರೈಕೆಯಲ್ಲಿನ ಅಸಮಾನತೆಯು ಜಾಗತಿಕವಾಗಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗಬಹುದಲ್ಲದೆ ಈ ಲಸಿಕೆ ಲಭ್ಯತೆ ಸಮಸ್ಯೆ ಅತ್ಯಂತ ಬಡ ರಾಷ್ಟ್ರಗಳನ್ನು ಅತಿ ಹೆಚ್ಚು ಬಾಧಿಸಲಿದೆ ಎಂದು ಎಚ್ಚರಿಸಿದೆ.
"ಕೋವಿಡ್-19 ಲಸಿಕೆಗಳ ಸಮಾನ ಜಾಗತಿಕ ಲಭ್ಯತೆಯ ಕುರಿತಾದ ರಾಜಕೀಯ ಘೋಷಣೆ''ಯನ್ನು ಮುಂದಿಡುವಲ್ಲಿ ಪ್ರಮುಖ ಪಾತ್ರವನ್ನು ಭಾರತ ವಹಿಸಿತ್ತಲ್ಲದೆ ಈ ಘೋಷಣೆಗೆ 180ಕ್ಕೂ ಅಧಿಕ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲ ದೊರಕಿತ್ತು.
ವಿಶ್ವ ಸಂಸ್ಥೆ ಸಾಮಾನ್ಯ ಅನೌಪಚಾರಿಕ ಸಭೆ ಶುಕ್ರವಾರ ನಡೆದಾಗ ಮಾತನಾಡಿದ ವಿಶ್ವ ಸಂಸ್ಥೆಯಲ್ಲಿನ ಭಾರತದ ಉಪ ಖಾಯಂ ಪ್ರತಿನಿಧಿ ಕೆ ನಾಗರಾಜ್, "ಹಲವಾರು ಲಸಿಕೆಗಳ ಲಭ್ಯತೆಯಿಂದಾಗಿ ಲಸಿಕೆ ವಿಚಾರದ ಸವಾಲು ಪರಿಹಾರಗೊಂಡಿದೆಯಾದರೂ ಲಸಿಕೆಗಳ ಲಭ್ಯತೆ ಹಾಗೂ ವಿತರಣೆಯ ಕುರಿತಾದ ವಿಚಾರ ಈಗ ಎದುರಾಗಿದೆ. ನಮ್ಮ ಜನರಿಗೆ ಲಸಿಕೆ ನೀಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ಜಾಗತಿಕವಾಗಿ ನಾವು ಪೂರೈಕೆ ಮಾಡಿದ್ದೇವೆ,'' ಎಂದು ಹೇಳಿದರು.





