ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮಾಜಿ ಸಂಸದ ಚಿನ್ಮಯಾನಂದ ಖುಲಾಸೆ

ಹೊಸದಿಲ್ಲಿ:ಉತ್ತರಪ್ರದೇಶದ ಕಾನೂನು ವಿದ್ಯಾರ್ಥಿಯನ್ನು ಒಳಗೊಂಡಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದ ಚಿನ್ಮಯಾನಂದ ಅವರನ್ನು ಲಕ್ನೋದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.
ಸ್ವಾಮಿ ಚಿನ್ಮಯಾನಂದ ಅವರನ್ನು ಎಲ್ಲಾ ಆರೋಪಗಳಿಂದ ನ್ಯಾಯಾಲಯವು ಖುಲಾಸೆಗೊಳಿಸಿದೆ ಎಂದು ಚಿನ್ಮಯಾನಂದ ಪರ ವಕೀಲ ಓಂ ಸಿಂಗ್ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ವಿದ್ಯಾರ್ಥಿನಿ ವಿರುದ್ದ 5 ಕೋಟಿ ರೂ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಇದಕ್ಕೆ ಯಾವುದೇ ಪುರಾವೆ ಸಿಗುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಎರಡೂ ಪ್ರಕರಣಗಳಲ್ಲಿ ಎಲ್ಲಾ ಸಾಕ್ಷಿಗಳು ಪ್ರತಿಕೂಲವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
23 ವರ್ಷದ ಕಾನೂನು ವಿದ್ಯಾರ್ಥಿನಿ ಅಕ್ಟೋಬರ್ ನಲ್ಲಿ ವಿಶೇಷ ನ್ಯಾಯಾಲಯದ ಮುಂದೆ ತನ್ನದೇ ಹೇಳಿಕೆಯನ್ನು ನಿರಾಕರಿಸಿದ್ದಳು. ಚಿನ್ಮಯಾನಂದ ವಿರುದ್ದ ಯಾವುದೇ ಆರೋಪ ಮಾಡಿಲ್ಲ ಎಂದು ಯುವತಿ ಹೇಳಿದ್ದಳು.
2019ರಲ್ಲಿ ಚಿನ್ಮಯಾನಂದ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದ ಯುವತಿ ಬಳಿಕ ನಾಪತ್ತೆಯಾಗಿದ್ದಳು. ಯುವತಿಯ ತಂದೆ ನಾಪತ್ತೆ ದೂರಿನಲ್ಲಿ ಚಿನ್ಮಯಾನಂದ ಹೆಸರನ್ನು ನಮೂದಿಸಿದ್ದರು. ಪೊಲೀಸರು ಚಿನ್ಮಯಾನಂದ ವಿರುದ್ಧ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ಯುವತಿಯನ್ನು ರಾಜಸ್ಥಾನದಲ್ಲಿ ಪತ್ತೆ ಹಚ್ಚಿ ಸುಪ್ರೀಂಕೋರ್ಟ್ ಎದುರು ಹಾಜರುಪಡಿಸಲಾಗಿತ್ತು.
ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ 2020ರ ಫೆ.5ರಂದು ಚಿನ್ಮಯಾನಂದ ಅವರನ್ನು ಉತ್ತರಪ್ರದೇಶದ ಶಹಜಹಾನ್ಪುರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.







