ಪೂರ್ವ ಮೇದಿನಿಪುರದಲ್ಲಿ ಹಿಂಸಾಚಾರ, ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಪಶ್ಚಿಮಬಂಗಾಳ ಚುನಾವಣೆ

ಪೂರ್ವ ಮಿಡ್ನಾಪುರ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಪೂರ್ವ ಮೇದಿನಿಪುರ ಜಿಲ್ಲೆಯು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಭಗಬನ್ ಪುರ ವಿಧಾನಸಭಾ ಕ್ಷೇತ್ರದ ಅರ್ಗೋಲ್ ಗ್ರಾಮ ಪಂಚಾಯತ್ ನ ಸತ್ಸತ್ಮಾಲ್ ಗ್ರಾಮದಲ್ಲಿ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿದೆ.
ಘಟನೆಯಲ್ಲಿ ಪತಾಶ್ಪುರ ಪೊಲೀಸ್ ಠಾಣೆಯ ಅಧಿಕಾರಿ ದೀಪಕ್ ಕುಮಾರ್ ಚಕ್ರವರ್ತಿ ಹಾಗೂ ಕೇಂದ್ರ ಪಡೆಯ ಸೈನಿಕ ಗಂಭೀರ ಗಾಯಗೊಂಡಿದ್ದಾರೆ.
ಆಡಳಿತಾರೂಢ ಟಿಎಂಸಿ ಭಯೋತ್ಪಾದನೆಯನ್ನು ಹರಡುತ್ತಿದೆ. ಭಗಬನ್ ಪುರ ವಿಧಾನಸಭಾ ಕ್ಷೇತ್ರದ ಅರ್ಗೋಲ್ ಪ್ರದೇಶದಲ್ಲಿ ಮತ ಗಟ್ಟೆ ಇದೆ. ಮತಗಟ್ಟೆಯ ಬಳಿ ಭಯೋತ್ಪಾದಕ ಕಾರ್ಖಾನೆ ಇದೆ. ಭಯೋತ್ಪಾದನೆಯನ್ನು ಪಸರಿಸುವ ಮೂಲಕ ಟಿಎಂಸಿ ಮತಗಟ್ಟೆಯ ಬಳಿ ಹಾನಿ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನೂಪ್ ಭಟ್ಟಾಚಾರ್ಯ ಎಎನ್ ಐಗೆ ತಿಳಿಸಿದ್ದಾರೆ.
ಈಗ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕೋಲ್ಕತಾಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಗಲಾಟೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಮೇದಿನಿಪುರದ ಬಿಜೆಪಿ ಅಭ್ಯರ್ಥಿ ಸಮಿತ್ ದಾಸ್ ಆರೋಪಿಸಿದ್ದಾರೆ.







