ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದಾರೆ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಸಹೋದರ ಆರೋಪ

ಕಾಂಟೈ: ಪಶ್ಚಿಮಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಕಾಂಟೈ ಪಟ್ಟಣದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಸಹೋದರ ಸೋಮೇಂದು ಅಧಿಕಾರಿಯ ಮೇಲೆ ದಾಳಿ ನಡೆಸಿ ಕಾರಿನ ಗಾಜುಪುಡಿಗಟ್ಟಿದ್ದಾರೆ ಎಂದು ವರದಿಯಾಗಿದೆ.
ತನ್ನ ಕಾರನ್ನು ಗುರಿಯಾಗಿಸಲಾಗಿತ್ತು. ಕಾರಿನ ಚಾಲಕನನ್ನು ಥಳಿಸಲಾಗಿದೆ ಎಂದು ಸೋಮೇಂದು ಅಧಿಕಾರಿ ಆರೋಪಿಸಿದ್ದಾರೆ.
ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ ದಾಸ್ ಹಾಗೂ ಅವರ ಪತ್ನಿಯ ಮೂರು ಮತಗಟ್ಡೆಗಳಲ್ಲಿ ಇದ್ದರು. ನಾನು ಅಲ್ಲಿಗೆ ಹೋದ ಬಳಿಕ ಅವರಿಗೆ ಸಮಸ್ಯೆಯಾಗಿದೆ. ಹೀಗಾಗಿ ಅವರು ನನ್ನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ನನ್ನ ಕಾರಿನ ಚಾಲಕನಿಗೂ ಥಳಿಸಿದ್ದಾರೆ ಎಂದು ಸೋವೇಂದು ಅಧಿಕಾರಿ ಹೇಳಿದ್ದಾರೆ.
ಕಾಂಟೈ ಮತದಾನ ಕೇಂದ್ರದಲ್ಲಿ ಕೆಲವು ಜನರು ನನಗೆ ಮತದಾನ ಮಾಡಲು ಅಡ್ಡಿಪಡಿಸಿದ್ದರು ಎಂದು ಸೋಮೆಂದು ಅಧಿಕಾರಿ ಈ ಮೊದಲು ಆರೋಪಿಸಿದ್ದರು.
ಘಟನೆಯ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಚಾಲಕ ಗೋಪಾಲ್ ಸಿಂಗ್ ಗೆ ಗಾಯವಾಗಿದೆ ಎಂದು ಸುವೇಂದು ಅಧಿಕಾರಿಯ ಇನ್ನೋರ್ವ ಸಹೋದರ ದಿಬೇಂದು ಅಧಿಕಾರಿ ಹೇಳಿದ್ದಾರೆ.
ಅಧಿಕಾರಿ ಕಾರಿನೊಳಗೆ ಕುಳಿತ್ತಿದ್ದಾಗ 20-25 ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಾರನ್ನು ಪುಡಿಗಟ್ಟಿದರು. ಬಳಿಕ ನನಗೆ ಥಳಿಸಿದರು. ಪೊಲೀಸರು ಸ್ಥಳದಲ್ಲಿದ್ದರೂ ನಮಗೆ ಸಹಾಯಕ್ಕೆ ಬರಲಿಲ್ಲ ಎಂದು ಚಾಲಕ ಸಿಂಗ್ ಎನ್ ಡಿಟಿವಿಗೆ ತಿಳಿಸಿದ್ದಾರೆ.







